ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂಗೆ ಟಿಕೆಟ್; ಹೊಸ ಮುಖಗಳಿಗೆ ಮಣೆಹಾಕಿದ ಕಾಂಗ್ರೆಸ್ ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಯೋಗಕ್ಕಿಳಿದ ಕೈ ಪಾಳಯ

ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂಗೆ ಟಿಕೆಟ್; ಹೊಸ ಮುಖಗಳಿಗೆ ಮಣೆಹಾಕಿದ ಕಾಂಗ್ರೆಸ್ ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಯೋಗಕ್ಕಿಳಿದ ಕೈ ಪಾಳಯ



ಮಂಗಳೂರು(Headlines Kannada): ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸನ್ನು ಆಡಳಿತಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಪಕ್ಷದ ನಾಯಕರು, ಈ ಬಾರಿ ಗೆಲ್ಲುವ ಕುದುರೆಗಳನ್ನೇ ಅಳೆದು ತೂಗಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಅದರಲ್ಲೂ ಕರಾವಳಿಯ ಹಿಂದುತ್ವದ ಪ್ರಯೋಗ ಶಾಲೆ ಎಂದೇ ಹೇಳಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸಮುಖಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ಹೊಸ ಪ್ರಯೋಗಕ್ಕಿಳಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಯ(2018) ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಒಂದೇ ಒಂದು ಕ್ಷೇತ್ರ. ಅದು ಯು.ಟಿ.ಖಾದರ್ ಅವರ ಮಂಗಳೂರು(ಉಳ್ಳಾಲ) ಕ್ಷೇತ್ರ.  ಉಳಿದಂತೆ 7 ಕ್ಷೇತ್ರಗಳು ಬಿಜೆಪಿ ಪಾಲಾಗಿತ್ತು. ಇದು ಕಾಂಗ್ರೆಸಿಗೆ ದೊಡ್ಡ ಶಾಕ್ ನೀಡಿತ್ತು.

ಕರಾವಳಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ವಿಷಯವಾಗಲಿ, ಅಭಿವೃದ್ಧಿ ಕಾರ್ಯದ ವಿಷಯವಾಗಲಿ, ಜನಪರ ಆಡಳಿತವಾಗಲಿ ಇಲ್ಲಿ ಚುನಾವಣೆಯ ಗೆಲುವಿಗೆ ಮೆಟ್ಟಿಲಾಗದೆ ಬರೀ 'ಹಿಂದುತ್ವ'ವೇ ಚುನಾವಣೆಗೆ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಇದರಿಂದಲೇ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತ ಬಂದಿದೆ.

ಇದನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 8 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದರಂತೆ ಮೂರು ಮಂದಿ ಹಳೆಬರನ್ನು ಹೊರತುಪಡಿಸಿ ಇನ್ನುಳಿದಂತೆ 5 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

8 ಕ್ಷೇತ್ರಗಳಲ್ಲಿ ಟಿಕೆಟ್ ಸಿಕ್ಕಿದ್ದು ಯಾರಿಗೆ ?

ಕರಾವಳಿಯ ಧರ್ಮ, ಜಾತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಕಾಂಗ್ರೆಸ್, ದಕ್ಷಿಣ ಕನ್ನಡದಲ್ಲಿ ಬಂಟ,  ಬಿಲ್ಲವ, ಮುಸ್ಲಿಂ,  ಕ್ರಿಶ್ಚಿಯನ್  ಸಮುದಾಯದವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ದೆಹಲಿ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಪಟ್ಟಿ ಸಿದ್ಧವಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ.




ಕಣಕ್ಕಿಳಿಯಲಿರುವ ಹಳೆಯ ಮುಖಗಳು 

ಮಂಗಳೂರು(ಉಳ್ಳಾಲ) ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಯು.ಟಿ.ಖಾದರ್, ಬ೦ಟ್ವಾಳ ಕ್ಷೇತ್ರದಿಂದ ರಮಾನಾಥ ರೈ, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜೆ.ಆರ್.ಲೋಬೊ ಅವರು 2023 ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಯಶಸ್ಸಾಗಿದ್ದಾರೆ.

ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಈ ಕ್ಷೇತ್ರಕ್ಕೆ ಬಡವರ ಬಂಧು, ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಇನಾಯತ್ ಅಲಿ ಹೆಸರನ್ನು ಕಾಂಗ್ರೆಸ್  ಅಂತಿಮಗೊಳಿಸಿದ್ದು, ಘೋಷಣೆಯಷ್ಟೇ ಬಾಕಿ ಇದೆ. 

ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿರುವ ಇನಾಯತ್ ಅಲಿ, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ NSUI  ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದು, ಜನಸೇವೆಯಲ್ಲಿ ಯುವನಾಯಕನಾಗಿ ಗುರುತಿಸಿಕೊಂಡಿದ್ದಾರೆ. 



ಮೂಡಬಿದ್ರೆ ಕ್ಷೇತ್ರದಿಂದ ಮಿಥುನ್ ರೈ, ಸುಳ್ಯ ಕ್ಷೇತ್ರದಿಂದ ನಂದ ಕುಮಾರ್,  ಬೆಳ್ತಂಗಡಿ ಕ್ಷೇತ್ರದಿಂದ ರಕ್ಷಿತ್ ಶಿವರಾಂ, ಪುತ್ತೂರು ಕ್ಷೇತ್ರದಿಂದ ಅಶೋಕ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, ಶೀಘ್ರದಲ್ಲೇ ಘೋಷಣೆ ಆಗಲಿದೆ. 

5 ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಯನ್ನೇ ಕಣಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು ಈ ಬಾರಿ ಕರಾವಳಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಗೆ ಬಿಗ್ ಶಾಕ್ ನೀಡುವ ಹುಮ್ಮಸ್ಸಿನಲ್ಲಿದೆ. 

Ads on article

Advertise in articles 1

advertising articles 2

Advertise under the article