
ಅಧಿಕಾರಕ್ಕೆ ಬಂದಾಗಿನಿಂದ 'ಅದಾನಿ' ಪರವಾಗಿ ಕೆಲಸ ಮಾಡುತ್ತಿರುವ ಮೋದಿ ಸರಕಾರ; ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ?: ರಾಹುಲ್ ವಾಗ್ದಾಳಿ
ನವದೆಹಲಿ: ಅದಾನಿ ಕಂಪನಿಯ ವಿರುದ್ಧ ಕಾಂಗ್ರೆಸ್ ತನಿಖೆಗೆ ಆಗ್ರಹಿಸಿರುವ ಮಧ್ಯೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಲೋಕಸಭೆಯಲ್ಲಿ ಅದಾನಿ ಕಂಪನಿಯು ಸ್ಟಾಕ್ ಮ್ಯಾನಿಪುಲೇಷನ್ ಮಾಡಿರುವ ಕುರಿತು ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ವರದಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಾನು ಕೇವಲ ಒಬ್ಬ ಉದ್ಯಮಿಯ ಹೆಸರನ್ನು ಮಾತ್ರ ಕೇಳಿದ್ದೇನೆ, ಅದು ಗೌತಮ್ ಅದಾನಿ ಎಂದ ರಾಹುಲ್ ಗಾಂಧಿ, ತಮಿಳುನಾಡಿನಿಂದ ಹಿಮಾಚಲ ಪ್ರದೇಶದವರೆಗೆ ನಾವು ಎಳ್ಳು ಕೇಳಿದರೂ ಕೇವಲ ‘ಅದಾನಿ’ ಎಂಬ ಹೆಸರನ್ನಷ್ಟೇ ಕೇಳುತ್ತಿದ್ದೇವೆ. ಇಡೀ ದೇಶದಾದ್ಯಂತ ಕೇವಲ 'ಅದಾನಿ' ಹೆಸರನ್ನಷ್ಟೇ ಹೇಳುತ್ತಿದ್ದಾರೆ ಎಂದರು.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅದಾನಿ ವಿಮಾನದಲ್ಲಿ ಒಟ್ಟಿಗೆ ಇರುವ ಫೋಟೋವನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಇಬ್ಬರೂ ಒಟ್ಟಿಗೆ ಸೇರಿಕೊಂಡು ಎಷ್ಟು ಪ್ರವಾಸ ಮಾಡಿದ್ದಾರೆ ? ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ? ಎಂದು ತಿಳಿಯಲು ಬಯಸುವುದಾಗಿ ಹೇಳಿದರು.
2014 ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅದಾನಿ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದೆ. 2014ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ, ಕೇವಲ ಕೆಲವೇ ಸಮಯದಲ್ಲಿ ವಿಶ್ವದ ಎರಡನೇ ಶ್ರೀಮಂತನ ಸ್ಥಾನಕ್ಕೇರಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ದೇಶದ ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿಗೆ ಸಹಾಯ ಮಾಡಲು ಮೋದಿ ಸರ್ಕಾರ ನಿಯಮಗಳನ್ನೇ ಬದಲಾಯಿಸಿದೆ ಎಂದು ದೂರಿದ ರಾಹುಲ್ ಗಾಂಧಿ, ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣ ಮುಂಬೈ ವಿಮಾನ ನಿಲ್ದಾಣವನ್ನು ಸಿಬಿಐ, ಇಡಿನಂತಹ ಏಜೆನ್ಸಿಗಳನ್ನು ಬಳಸಿಕೊಂಡು ಜಿವಿಕೆಯಿಂದ ಕಸಿದುಕೊಂಡು ಮೋದಿ ಸರ್ಕಾರ ಅದಾನಿಗೆ ನೀಡಿತು ಎಂದು ದೂರಿದರು.