ಉಡುಪಿ: ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ನಡೆಯಿತು.
ಈ ಪ್ರಯುಕ್ತ ದೇವಸ್ಥಾನವನ್ನು ವಿವಿಧ ಬಗೆಯ ಹೂವು, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಪುರಾಣ ಪ್ರಸಿದ್ಧ ಭಜನಾ ದಿಂಡಿ ಮೆರವಣಿಗೆ ನಡೆಯಿತು. ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ದಿಂಡಿ ಮೆರವಣಿಗೆಗೆ ಚಾಲನೆ ನೀಡಿದರು. ವಿಶೇಷ ಹೂಗಳಿಂದ ಅಲಂಕೃತಗೊಂಡ ವಾಹನದಲ್ಲಿ ಆಗಮಿಸಿದ ಶ್ರೀಗಳು, ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.
ಶ್ರೀ ವಿಠೋಬ ರುಖುಮಾಯಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉಡುಪಿ ದೇವಳದಿಂದ ಹೊರಟ ಮೆರವಣಿಗೆ ಐಡಿಯಲ್ ಸರ್ಕಲ್, ಹಳೇ ಡಯಾನ ಸರ್ಕಲ್ , ತ್ರಿವೇಣಿ ಸರ್ಕಲ್ , ಚಿತ್ತರಂಜನ್ ವೃತ್ತ , ಕೊಳದಪೇಟೆಯಾಗಿ ದೇವಳಕ್ಕೆ ಬಂದು ತಲುಪಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು, ಯುವತಿಯರು ಭಜನೆ ಸಂಕೀರ್ತನೆ ಹಾಡಿ ಕುಣಿದರು.
