
ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಮತ್ತೆ ಹೇಳಿದ ಟ್ರಂಪ್; I Love Pakistan ಎಂದ ಅಮೆರಿಕ ಅಧ್ಯಕ್ಷನಿಂದ ಪಾಕ್ ಸೇನಾ ಮುಖ್ಯಸ್ಥನಿಗೆ ವಿಶೇಷ ಭೋಜನಕೂಟ
ವಾಷಿಂಗ್ಟನ್: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ 'ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿದ್ದ ಯುದ್ಧವನ್ನು ಸ್ಥಗಿತ ಮಾಡಿದ್ದು ನಾನೇ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಮತ್ತೆ ಭಾರತ ಪಾಕಿಸ್ತಾನ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಮಾತನಾಡಿದ್ದು, ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, 'ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಅದ್ಭುತ ವ್ಯಕ್ತಿ. ನಾನು ನಿನ್ನೆ ರಾತ್ರಿ ಅವರೊಂದಿಗೆ ಮಾತನಾಡಿದೆ" ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಯೋಜನೆಗಳನ್ನು ಉಲ್ಲೇಖಿಸುತ್ತಾ, "ನಾವು ಭಾರತದ ಪ್ರಧಾನಿ ಮೋದಿಯೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಿದ್ದೇವೆ. ಆದರೆ ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದರು.
ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಇಬ್ಬರನ್ನೂ ಶ್ಲಾಘಿಸಿದ ಟ್ರಂಪ್, "ಈ ವ್ಯಕ್ತಿ (ಮುನೀರ್) ಪಾಕಿಸ್ತಾನದ ಕಡೆಯಿಂದ ಯುದ್ಧವನ್ನು ನಿಲ್ಲಿಸುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದರು, ಇನ್ನೊಂದು ಕಡೆಯಿಂದ ಮೋದಿ. ಅವರು ಅದನ್ನು ಮಾಡಲು ಹೊರಟಿದ್ದರು ಮತ್ತು ಅವರಿಬ್ಬರೂ ಪರಮಾಣು ಸಹಿತ ರಾಷ್ಟ್ರಗಳು... ನಾನು ಎರಡು ಪ್ರಮುಖ ಪರಮಾಣು ರಾಷ್ಟ್ರಗಳ ನಡುವಿನ ಯುದ್ಧವನ್ನು ನಿಲ್ಲಿಸಿದೆ. ಆದರೆ ಅದರ ಬಗ್ಗೆ ಒಂದು ಕಥೆಯೂ ಬರೆಯಲ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಮುನೀರ್ ಗೆ ವಿಶೇಷ ಭೋಜನಕೂಟ
ಅತ್ತ ಇಸ್ರೇಲ್ ಇರಾನ್ ಯುದ್ಧ ಮುಂದುವರೆದಿರುವಂತೆಯೇ ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಅಧ್ಯಕ್ಷರು ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯದ ಸೇನಾ ಮುಖ್ಯಸ್ಥರೊಂದಿಗೆ ಊಟ ಮಾಡುತ್ತಾರೆ ಎಂದು ಶ್ವೇತಭವನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೂಟವು ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದೆ. ಜಿ7 ನಾಯಕರ ಶೃಂಗಸಭೆಗಾಗಿ ಕೆನಡಾದ ಕನನಾಸ್ತಿಸ್ಗೆ ತಮ್ಮ ಪ್ರವಾಸವನ್ನು ಟ್ರಂಪ್ ಮೊಟಕುಗೊಳಿಸಿದ್ದರು ಮತ್ತು ಇತ್ತೀಚಿನ ಇಸ್ರೇಲ್-ಇರಾನ್ ಸಂಘರ್ಷದೊಂದಿಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಿನ್ನೆ ಬೆಳಿಗ್ಗೆ ವಾಷಿಂಗ್ಟನ್ಗೆ ಮರಳಿದರು.