ಮೈಸೂರಿನಲ್ಲಿ ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಬುಧವಾರ ನಿಧನರಾದ ಹಿರಿಯ ಸಾಹಿತಿ ಎಸ್​.ಎಲ್​. ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನಲ್ಲೇ ಎಸ್​. ಎಲ್​. ಭೈರಪ್ಪ ಅವರ ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಬಿಜೆಪಿ ಹೇಳ್ತಾರೆ ಅಂತ ಮಾಡಲ್ಲ. ಭೈರಪ್ಪ ಅವರ ಕರ್ಮ ಕ್ಷೇತ್ರದಲ್ಲೇ ಸ್ಮಾರಕ ಮಾಡುತ್ತೇವೆ. ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕೂಡ, ಅದು ಬೇರೆ ಬೇರೆ. ಅವರ ಸಾಹಿತ್ಯ, ಜ್ಞಾನಕ್ಕಾಗಿ ಸ್ಮಾರಕ ಮಾಡುತ್ತೇವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರುತ್ತದೆ ಎಂದು ತಿಳಿಸಿದರು.

ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಸಾರಸ್ವತ ಲೋಕ‌ ಬಡವಾಗಿದೆ. ಅವರು ಸುಮಾರು 25 ಕಾದಂಬರಿ ಬರೆದಿದ್ದಾರೆ. ಮೈಸೂರಲ್ಲಿ ಹೆಚ್ಚು ಕಾಲ‌ ಇದ್ರು. ಹೈಸ್ಕೂಲ್ - ಎಂಎವರೆಗೆ‌ ಮೈಸೂರಲ್ಲಿ ವಿದ್ಯಾಭ್ಯಾಸ ಮಾಡಿದ್ರು. ಅವರ‌ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆ ಆಗಿವೆ. ಅವರದ್ದು ಒಬ್ಬರದ್ಜೇ ಆ ಕೀರ್ತಿ. ನಾವು ಪಟ್ನಾದಲ್ಲಿದ್ದಾಗ ವಿಶ್ವೇಶ್ವರ್ ಭಟ್ಟರು ಫೋನ್ ಮಾಡಿ, ಭೈರಪ್ಪ ಅವರು ನಿಧನರಾಗಿರುವ ಕುರಿತು ತಿಳಿಸಿದರು" ಎಂದು ಹೇಳಿದರು.

ಬಹಳ ಕಷ್ಟಪಟ್ಟು ಮೇಲೆ ಬಂದ ಅವರು ಬಹಳ‌ ಓದುಗರನ್ನು ಸಂಪಾದನೆ ಮಾಡಿದ್ದರು. ಅವರ ವಿಷಯ ಫಿಲಾಸಫಿ. ಆಶ್ಚರ್ಯ ಏನಂದ್ರೆ ಬೋಧನೆ ಮಾಡುತ್ತಲೇ ಸಾಹಿತ್ಯ ಕೃಷಿ ಮಾಡಿದರು. ಕಾದಂಬರಿ ಬರೆಯೋದು ತಮ್ಮ ಆತ್ಮತೃಪ್ತಿಗಾಗಿ ಅಂತ ಹೇಳ್ತಿದ್ದರು. ಅವರ ಬದುಕಿನ ಅನುಭವದ ಮೇಲೆ ಕಾದಂಬರಿ ಬರೆಯೋರು. ಎಸ್​.ಎಲ್. ಭೈರಪ್ಪ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು. ಹಾಗಂತ ಅವರಿಗೆ ಆ ಬಗ್ಗೆ ಏನೂ ಬೇಸರ ಇರಲಿಲ್ಲ ಎಂದರು.

ಡಿಸಿಎಂ ಡಿ. ಕೆ. ಶಿವಕುಮಾರ್​ ಮಾತನಾಡಿ, ಎಸ್. ಎಲ್. ಭೈರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಕನಕಪುರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಭೈರಪ್ಪ. ಆಗ ಭೈರಪ್ಪ ಅವರು ಪರಿಚಯವಾಗಿದ್ದು. ಅವರು ಬರವಣಿಗೆಯಲ್ಲಿ ರಾಜಿ ಆಗ್ತಾ ಇರಲಿಲ್ಲ. ಬಹುಶಃ ಕಾದಂಬರಿ ಹೊರ ದೇಶದಲ್ಲಿ ಭಾಷಾಂತರ ಆಗಿದ್ದು, ವಿಭಿನ್ನ ಭಾಷೆಯಲ್ಲಿ ಭಾಷಾಂತರ ಆಗಿದ್ದು, ಕಾದಂಬರಿಗಳು ಸಿನಿಮಾಗಳಾಗಿರುವುದು ನಾವು ಮೆಲುಕು ಹಾಕುವಂತಹ ವಿಷಯ ಎಂದು ಸ್ಮರಿಸಿದರು.

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮಾತನಾಡಿ, ಅದ್ವಿತೀಯ ಸಾಹಿತಿಯಾದ ಎಸ್​. ಎಲ್​. ಭೈರಪ್ಪ ವಿಧಿವಶರಾಗಿದ್ದಾರೆ. ಅವರು ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದರು. ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಅವರ ನಿಧನದಿಂದ ಕನ್ನಡ ನಾಡು ಅನಾಥವಾಗಿದೆ. ದೇಶ-ವಿದೇಶದ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ತಿಳಿಸಿದರು.