'ದಿ ಕೇರಳ ಸ್ಟೋರಿ 2' ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಿದ ಕೇರಳ ಹೈಕೋರ್ಟ್
ಕೊಚ್ಚಿ: "ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್" ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ದಿ ಕೇರಳ ಸ್ಟೋರಿ 2 ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಸೆನ್ಸಾರ್ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸೆನ್ಸಾರ್ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದೆ.
ಸೆನ್ಸಾರ್ ಮಂಡಳಿ ನಿಯಮಗಳನ್ನು ಪಾಲಿಸಿರುವುದೇ ಎಂದು ಅನುಮಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಚಿತ್ರವನ್ನು ಅದರ ಮೂಲ ನಿಗದಿತ ಬಿಡುಗಡೆ ದಿನಾಂಕವಾದ ಫೆಬ್ರವರಿ 27ರಂದು ಬಿಡುಗಡೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೆನ್ಸಾರ್ ಮಂಡಳಿಯು ತನ್ನ ವಿವೇಚನೆಯನ್ನು ಸಮರ್ಪಕವಾಗಿ ಅನ್ವಯಿಸಿರುವುದು ಕಾಣುತ್ತಿಲ್ಲ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಚಿತ್ರದ ಭಾಗವಾಗಿರುವ ಟೀಸರ್‌ನಲ್ಲಿರುವ ವಿಷಯವು ಪ್ರಾಥಮಿಕವಾಗಿ ಸಾರ್ವಜನಿಕ ಗ್ರಹಿಕೆಯನ್ನು ವಿರೂಪಗೊಳಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.
ದಿ ಕೇರಳ ಸ್ಟೋರಿ 2 ಸಿನಿಮಾದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಆಗಿದೆ. ಈ ಸಿನಿಮಾದಿಂದ ರಾಜ್ಯದಲ್ಲಿ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಚಿತ್ರದ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದೆ.
‘ದಿ ಕೇರಳ ಸ್ಟೋರಿ 2’ಚಿತ್ರವನ್ನು ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.