ಕನೌಜ್: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಬಾಜೆಡಿ ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಸಹಾಯಕ ಶಿಕ್ಷಕರು ತರಗತಿಯೊಳಗೇ ಪರಸ್ಪರ ಚುಂಬಿಸುತ್ತಾ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸೌರಿಖ್ ಬ್ಲಾಕ್‌ನಲ್ಲಿರುವ ಕಾಂಪೋಸಿಟ್ ಪ್ರಾಥಮಿಕ ಶಾಲೆಯಲ್ಲಿ ನಿಯೋಜಿತರಾಗಿದ್ದ ಇಬ್ಬರೂ ಸಹಾಯಕ ಶಿಕ್ಷಕರನ್ನು ಜಿಲ್ಲಾ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪತ್ನಿಯೇ ಅಳವಡಿಸಿದ್ದ ರಹಸ್ಯ ಕ್ಯಾಮೆರಾ?
ಮಾಧ್ಯಮ ವರದಿಗಳ ಪ್ರಕಾರ, ಪತಿಯು ಸಹೋದ್ಯೋಗಿ ಶಿಕ್ಷಕಿಯೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನಗೊಂಡ ಪತ್ನಿ ತರಗತಿ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದಳು ಎನ್ನಲಾಗಿದೆ. ಅದರಲ್ಲಿ ಶಾಲಾ ಸಮಯದಲ್ಲೇ ಇಬ್ಬರು ಶಿಕ್ಷಕರು ಅಶ್ಲೀಲ ವರ್ತನೆಯ ದೃಶ್ಯಗಳು ಸೆರೆಯಾಗಿದ್ದು, ಬಳಿಕ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೋಷಕರು, ಗ್ರಾಮಸ್ಥರ ಆಕ್ರೋಶ
ಈ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಡಿಯೊ ವೈರಲ್ ಆದ ನಂತರ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಪವಿತ್ರ ಸ್ಥಳವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಬಳಿಕ ಕೆಲ ಶಿಕ್ಷಕರ ಸಂಬಂಧಿಕರು ಶಾಲೆಗೆ ಆಗಮಿಸಿ ಪ್ರತಿಭಟನೆ ನಡೆಸಿದರೆಂದು ತಿಳಿದುಬಂದಿದ್ದು, ಆ ವೇಳೆ ಇಬ್ಬರು ಶಿಕ್ಷಕರೂ ಶಾಲೆಯಲ್ಲಿ ಇರಲಿಲ್ಲಎನ್ನಲಾಗಿದೆ.
ತನಿಖೆಯ ಬಳಿಕ ಅಮಾನತು
ಜುಲೈ 13ರಂದು ಜಿಲ್ಲಾ ಮೂಲ ಶಿಕ್ಷಣಾಧಿಕಾರಿ (BSA) ಸಂದೀಪ್ ಕುಮಾರ್ ಪ್ರಕರಣದ ತನಿಖೆಗೆ ಆದೇಶ ನೀಡಿದ್ದರು. ಸೌರಿಖ್ ಬ್ಲಾಕ್ ಶಿಕ್ಷಣಾಧಿಕಾರಿ (BEO) ವಿಶ್ವನಾಥ್ ಪಾಠಕ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ವರದಿಯನ್ನು ಪರಿಶೀಲಿಸಿದ ಬಳಿಕ ಜಿಲ್ಲಾ ಶಿಕ್ಷಣಾಧಿಕಾರಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ. ಅಮಾನತು ಅವಧಿಯಲ್ಲಿ ಪುರುಷ ಶಿಕ್ಷಕರನ್ನು ಗುಗರಾಪುರ್ ಬ್ಲಾಕ್ ಸಂಪನ್ಮೂಲ ಕೇಂದ್ರಕ್ಕೆ (BRC) ಹಾಗೂ ಮಹಿಳಾ ಶಿಕ್ಷಕಿಯನ್ನು ತಲ್ಗ್ರಾಮ್ ಬ್ಲಾಕ್ ಸಂಪನ್ಮೂಲ ಕೇಂದ್ರಕ್ಕೆ ನಿಯೋಜಿಸಲಾಗಿದೆ.
ಇದೇ ವೇಳೆ, ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಂದ 15 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಪ್ರಕರಣದ ಕುರಿತು ಇಲಾಖಾ ಮಟ್ಟದ ತನಿಖೆಯೂ ಮುಂದುವರಿದಿದೆ.
