ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗುವುದನ್ನು ತಡೆಯಲು ಮತ್ತು ‘ವಿಬಿಜಿ ರಾಮ್‌ಜಿ’ (ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಅಡಿಯಲ್ಲಿ ಅರ್ಹರಿಗೆ ತಕ್ಷಣ ಉದ್ಯೋಗ ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಕೇಳಿ ಬರುವ ಬಡ ಹಾಗೂ ಭೂರಹಿತ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ವಿಫಲರಾಗುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ನಿರ್ದಾಕ್ಷಿಣ್ಯವಾಗಿ ಅಮಾನತು ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಹಾಗೂ ಇಲಾಖಾ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ ಸಚಿವರು, “ಯಾವುದೇ ಕಾರಣಕ್ಕೂ ಕೂಲಿಕಾರರಿಗೆ ಕೆಲಸ ನಿರಾಕರಿಸಬಾರದು. ಸಾರ್ವಜನಿಕರಿಂದ ದೂರುಗಳು ಬಂದರೆ ಸಂಬಂಧಪಟ್ಟ ಪಿಡಿಒ ಹಾಗೂ ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲಸ ನೀಡದೆ ನಕಲಿ ಬಿಲ್ ಸೃಷ್ಟಿಸುವುದು, ಕೆಲಸ ಮಾಡದೇ ಹಣ ಎತ್ತುವುದು ಅಥವಾ ಕಳಪೆ ಮಟ್ಟದ ಕಾಮಗಾರಿ ನಡೆಸುವುದು ಕಂಡುಬಂದರೆ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಲು ಸಚಿವರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸೂಚಿಸಿದ್ದಾರೆ.
