ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಮೂವರಿಗೆ ಸಚಿವ ಸ್ಥಾನ; ರಿಜ್ವಾನ್‌ ಅರ್ಷದ್ ಗೆ ಒಲಿದ ಸಚಿವ ಸ್ಥಾನದ ಭಾಗ್ಯ

ಬೆಂಗಳೂರು: ಇಂದು ನಡೆದ ಸಂಪುಟ ವಿಸ್ತರಣೆಯ ಮೂಲಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಮ್ಮ ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. 

ಯು.ಟಿ.ಖಾದರ್ ಅವರು ಪ್ರಥಮ ಹಂತದ ಸಂಪುಟದಲ್ಲಿ ಸ್ಥಾನ ಪಡೆದಿದ್ದರೆ, ಇಂದು ನಡೆದ ಸಂಪುಟ ವಿಸ್ತರಣೆಯಲ್ಲಿ B. Z. ಜಮೀರ್ ಅಹಮದ್ ಖಾನ್ ಹಾಗು ರಿಜ್ವಾನ್ ಅರ್ಷದ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ  ಡಿಕೆ ಶಿವಕುಮಾರ್‌ ಸಂಪುಟದಲ್ಲಿ ಈಗ ಒಟ್ಟು ಮೂವರು ಮುಸ್ಲಿಂ ನಾಯಕರು ಸ್ಥಾನ ಪಡೆದುಕೊಂಡಿದ್ದಾರೆ. 

ಡಿಕೆ ಶಿವಕುಮಾರ್‌ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನ ಸಚಿವರಾಗಿ ಯುಟಿ ಖಾದರ್‌ ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ಯುಟಿ ಖಾದರ್‌ ಪ್ರಸ್ತುತ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ವಿಸ್ತರಣೆಯಾದ ಸಚಿವ ಸಂಪುಟದಲ್ಲಿ, ಶಾಸಕರಾದ ಜಮೀರ್‌ ಅಹ್ಮದ್‌ ಖಾನ್‌ ಮತು ರಿಜ್ವಾನ್‌ ಅರ್ಷದ್‌ ಅವರಿಗೂ ಸಚಿವ ಸ್ಥಾನ ಒದಲಿದು ಬಂದಿದೆ. ಇಬ್ಬರಿಗೂ ಯಾವ ಖಾತೆ ದೊರೆಯಲಿದೆ ಎಂಬುದು ಇನ್ನೂ ದೃಢಪಟ್ಟಿಲ್ಲವಾದರೂ, ಇಬ್ಬರೂ ಕ್ಯಾಬಿನೆಟ್‌ ದರ್ಜೆಯ ಸಚಿವರಾಗುವುದು ಖಚಿತ.

ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ , ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಪರೋಕ್ಷವಾಗಿ ಕೆಲಸ ಮಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಜಮೀರ್‌ ಅಹ್ಮದ್‌ ಖಾನ್‌ ಆಡಿಯೋ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು.

ಅದೇ ರೀತಿ ಮತ್ತೋರ್ವ ಪ್ರಬಲ ಮುಸ್ಲಿಂ ನಾಯಕ ಸಲೀಂ ಅಹ್ಮದ್‌ ಅವರಿಗೆ ವಿಧಾನಪರಿಷತ್‌ ಸಭಾಪತಿ ಸ್ಥಾನ ನೀಡಲಾಗಿದೆ. ಬಸವರಾಜ ಹೊರಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ಆ ಸ್ಥಾನಕ್ಕೆ ಸಲೀಂ ಅಹ್ಮದ್‌ ಅವರನ್ನು ಕೂರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿದೆ. ಇದಿಷ್ಟೇ ಅಲ್ಲದೇ ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ, ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರನ್ನು ಆಯ್ಕೆ ಮಾಡಿದೆ. ಡಿಕೆ ಶಿವಕುಮಾರ್‌ ಸರ್ಕಾರದಲ್ಲಿ ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾಶಸ್ತ್ಯ ದೊರೆತಿದೆ.