ನವದೆಹಲಿ: ಇಲ್ಲಿನ ವಸಂತ್ ಕುಂಜ್ ನಲ್ಲಿರುವ ಶ್ರಿ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ 39 ನೆ ಚಾತುರ್ಮಾಸ್ಯ ವ್ರತ ನಿರತರಾಗಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿ ಮಾಡಿ, ಆಶೀರ್ವಾದ ಪಡೆದರು.
ಸೋಮವಾರ ಸಂಜೆ 4.30 ರ ಸುಮಾರಿಗೆ ಆಗಮಿಸಿದ ಅಮಿತ್ ಶಾರನ್ನು ಗುರುಕುಲದ ವಿದ್ಯಾರ್ಥಿಗಳ ವೇದಘೋಷ , ಪೂರ್ಣ ಕುಂಭಸ್ವಾಗತ ನೀಡಿ ಡಾ.ವರಖೇಡಿ ಶ್ರೀನಿವಾಸ ಆಚಾರ್ಯ, ಡಾ ವಿಠೋಬಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಬರಮಾಡಿಕೊಂಡರು .ಶ್ರೀ
ಕೃಷ್ಣಧಾಮಕ್ಕೆ ಶ್ರೀ ಕೃಷ್ಣ ದೇವರ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಸಂಸ್ಥಾನದ ಪಟ್ಟದ ದೇವರ ದರ್ಶನ , ಶ್ರೀ ವಿಶ್ವೇಶ ತೀರ್ಥ ಸಂಸ್ಮರಣ ಧ್ಯಾನಮಂದಿರಕ್ಕೆ ತೆರಳಿ ಪಾದುಕಾದರ್ಶನ ಪಡೆದರು .ಬಳಿಕ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಫಲಪುಷ್ಪ ಸಮರ್ಪಿಸಿ ಸತ್ಕರಿಸಿದರು.
ಕೆಲಹೊತ್ತು ಆಪ್ತ ಸಮಾಲೋಚನೆ ನಡೆಯಿತು. ಸ್ವಾಮೀಜಿಯವರು ಶಾಲು , ಪೇಟ ಹಾರ ಸ್ಮರಣಿಕೆ ಸಹಿತ ಫಲಮಂತ್ರಾಕ್ಷತೆ ನೀಡಿ ಆಶೀರ್ದಿಸಿದರು. ಸಂಸದರಾದ ಬಾನ್ಸುರಿ ಸ್ವರಾಜ್ , ರಾಮ ವೀರ್ ಸಿಂಗ್ ಬಿದೂರಿ , ಶಾಸಕರಾದ ಅನಿಲ್ ಶರ್ಮಾ ಕೈಲಾಶ್ ಗೆಹ್ಲೋಟ್ , ಡಿಡಿಎ ಸದಸ್ಯ ರಾಜೀವ್ ಬಬ್ಬರ್ , ರಾಕೇಶ್ ಗೌರ್ ವಿದ್ವಾನ್ ಎನ್ ವಿಠಲ ಭಟ್ , ಟಿ ಪಿ ಅನಂತ ಶ್ರೀಗಳ ಆಪ್ತಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
