ದೆಹಲಿ; ಅಕ್ಟೋಬರ್‌ 9ರ CJP ಪ್ರತಿಭಟನೆ: ಮೆಟ್ರೋ ನಿರ್ಬಂಧ, ರೈಲುಗಳ ರದ್ದು, 23,000 ಪೊಲೀಸರ ನಿಯೋಜನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ (CJP Protest) ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆ ದೆಹಲಿ ಪೊಲೀಸರು (Delhi Police) ಫುಲ್‌ ಅಲರ್ಟ್‌ ಆಗಿದ್ದಾರೆ. ದೆಹಲಿಯಲ್ಲಿ ಮೆಟ್ರೋ ನಿರ್ಬಂಧಿಸಲಾಗಿದೆ. ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಸ್ಥಳದಲ್ಲಿ 23,000 ಪೊಲೀಸರನ್ನು ನಿಯೋಜಿಸಲಾಗಿದೆ.

ಅಕ್ಟೋಬರ್‌ 9ರ ಮಧ್ಯಾಹ್ನ 2 ಗಂಟೆಯ ಬಳಿಕ ಮೂಲ ನಿಲ್ದಾಣದಿಂದ ಹೊರಟು, ನಾಳೆ ನಿಗದಿತ ಅವಧಿಯಲ್ಲಿ ದೆಹಲಿ ತಲುಪಬೇಕಿದ್ದ ರೈಲುಗಳು ಮೂಲ ನಿಲ್ದಾಣದಿಂದಲೇ ರದ್ದುಪಡಿಸಲಾಗಿದೆ. ರೈಲು ನಿಲ್ದಾಣಗಳ ಸುತ್ತಮುತ್ತ ಭಾರಿ ವಾಹನ ದಟ್ಟಣೆ ಉಂಟಾಗುವ ಆತಂಕ ಇದೆ.‌

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ, ಸಂಚಾರ ನಿರ್ಬಂಧಗಳ ಸಿದ್ಧತೆಯಾಗಿದೆ. ಪ್ರಯಾಣಿಕರು ಪ್ರಯಾಣ ಆರಂಭಿಸುವ ಮುನ್ನ ರೈಲಿನ ಸ್ಥಿತಿಗತಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.

ಪ್ರತಿಭಟನೆಗೆ ಅನುಮತಿ ನಿರಾಕರಣೆ

ಜಂತರ್‌ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಯಾವುದೇ ಪ್ರತಿಭಟನೆಗೆ ಅನುಮತಿ ಕೋರಿ 10 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಅದ್ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ, ಹಿಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ ನಡೆದಿದೆ. ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂದು ಸ್ಪಷ್ಟಪಡಿಸಿದ್ದಾರೆ.