ಭಾರತೀಯ ಐಟಿ ಕಂಪನಿಗಳಿಗೆ ಶಾಕ್ ನೀಡಿದ ಅಮೆರಿಕ; ಗ್ರೀನ್‌ಕಾರ್ಡ್‌ ಯೋಜನೆಯಿಂದ ಅಮಾನತು!

ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ (ಗ್ರೀನ್‌ ಕಾರ್ಡ್‌) ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ (U.S. Department of Labor) ಭಾರತೀಯ ಟೆಕ್‌ ದೈತ್ಯ ಕಂಪನಿಗಳಿಗೆ ಶಾಕ್‌ ಕೊಟ್ಟಿದೆ. ಇನ್ಫೋಸಿಸ್ (Infosys), ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಗ್ರೀನ್‌ ಕಾರ್ಡ್‌ ಯೋಜನೆಯಿಂದ ಅಮಾನತುಗೊಳಿಸಿದೆ.

H-1B ವೀಸಾ ಹೊಂದಿರುವ ಉದ್ಯೋಗಿಗಳಿಗೆ 'ಗ್ರೀನ್ ಕಾರ್ಡ್'ಗಾಗಿ ಅರ್ಜಿ ಸಲ್ಲಿಸಲು ಕಂಪನಿಗಳಿಗೆ ಅವಕಾಶ ನೀಡುವ 'ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮ'ದಿಂದ (Permanent Labour Certification Programme), ಅಮೆರಿಕ ಗುರುವಾರದಂದು ಕಾಗ್ನಿಜಂಟ್ (Cognizant), ಇನ್ಫೋಸಿಸ್ (Infosys), ಟಾಟಾ (Tata), ವಿಪ್ರೋ (Wipro), ಎಚ್‌ಸಿಎಲ್ (HCL), ಕ್ಯಾಪ್‌ಜೆಮಿನಿ (Capgemini), ಮೈಕ್ರೋಸಾಫ್ಟ್ (Microsoft) ಮತ್ತು ಅಡೋಬ್ (Adobe) ಮುಂತಾದ ಐಟಿ (IT) ಸಂಸ್ಥೆಗಳನ್ನು ಅಮಾನತುಗೊಳಿಸಿದೆ.

ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅಮೆರಿಕದ ವಂಚನೆ-ವಿರೋಧಿ ಕಾರ್ಯಪಡೆಯ (Anti-Fraud Task Force) ಮುಖ್ಯಸ್ಥರ ಸಮ್ಮುಖದಲ್ಲಿ ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಕೀತ್ ಸೋಂಡರ್‌ಲಿಂಗ್ ಈ ಘೋಷಣೆಯನ್ನು ಮಾಡಿದರು.

"ವಿಶ್ವದ ಅತಿದೊಡ್ಡ ಐಟಿ ಹೊರಗುತ್ತಿಗೆ ಸಂಸ್ಥೆಗಳಾದ ಕಾಗ್ನಿಜಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿಗಳನ್ನು ನಾನು ಈ ಮೂಲಕ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮದಿಂದ ಅಮಾನತುಗೊಳಿಸುತ್ತಿದ್ದೇನೆ," ಎಂದು ಸೋಂಡರ್‌ಲಿಂಗ್ ಹೇಳಿದರು.

ಕಾರ್ಮಿಕ ಇಲಾಖೆ ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳನ್ನೂ ಸಹ ಈ ಕಾರ್ಯಕ್ರಮದಿಂದ ಅಮಾನತುಗೊಳಿಸುತ್ತಿದೆ ಎಂದು ಅವರು ತಿಳಿಸಿದರು.

"ಈ ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ಹೊಸ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಅರ್ಜಿಗಳನ್ನು ನಾವು ಸ್ವೀಕರಿಸುವುದಿಲ್ಲ ಅಥವಾ ಬಾಕಿ ಇರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ," ಎಂದು ಸೋಂಡರ್‌ಲಿಂಗ್ ಹೇಳಿದರು.

"2009 ರಿಂದೀಚೆಗೆ, ಈ ಕಂಪನಿಗಳು ಮಾತ್ರವೇ ಸುಮಾರು 30 ಲಕ್ಷ (3 ಮಿಲಿಯನ್) ವಿದೇಶಿ ಉದ್ಯೋಗಿಗಳಿಗೆ ಬೇಡಿಕೆ ಸಲ್ಲಿಸಿವೆ. ಇವು 2,30,000 ಕ್ಕೂ ಹೆಚ್ಚು H-1B ವೀಸಾ ಅನುಮೋದನೆಗಳನ್ನು ಮತ್ತು 1,00,000 ಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣೀಕರಣಗಳನ್ನು ಪಡೆದುಕೊಂಡಿವೆ," ಎಂದು ಅವರು ತಿಳಿಸಿದ್ದಾರೆ.

"ಅಂದರೆ, ಅಮೆರಿಕದ ಉದ್ಯೋಗಿಗಳಿಂದ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳಲಾಗಿದೆ ಎಂದರ್ಥ," ಎಂದು ಸೋಂಡರ್‌ಲಿಂಗ್ ಹೇಳಿದರು.