ವಿಧಾನ ಪರಿಷತ್'ಗೆ ನಾಮನಿರ್ದೇಶನ ಗೊಳ್ಳುವ ಕಾಂಗ್ರೆಸಿನ ಮೂವರು ನಾಯಕರ ಹೆಸರು ಅಂತಿಮ
ಬೆಂಗಳೂರು: ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಗೊಳ್ಳುವ ಮೂವರು ನಾಯಕರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಶಿಕ್ಷಣತಜ್ಞರಾದ ಮನ್ಸೂರ್ ಅಲಿ ಖಾನ್ ಮತ್ತು ಎಂಆರ್ ಸೀತಾರಾಮ್ ಮತ್ತು ಮಾಜಿ ಐಆರ್ ಎಸಿ ಅಧಿಕಾರಿ ಸುದಾಮ ದಾಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಸುಧಾಮ ದಾಸ್ ಈ ಹಿಂದೆ ಕೆಪಿಸಿಸಿ ಸಮಿತಿಯ ಸಹ-ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಪರಿಶಿಷ್ಟ ಜಾತಿ (ಎಡ)ಗೆ ಸೇರಿದವರಾಗಿದ್ದಾರೆ. ಈ ಮೂವರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಪಕ್ಷದ ಹೈ ಕಮಾಂಡ್ ಗೆ ಕಳುಹಿಲಾಗಿದ್ದು ಅನುಮೋದನೆಯೊಂದಿಗೆ ಹಿಂತಿರುಗಿದೆ. ಪಟ್ಟಿಯನ್ನು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಈ ಮೂವರು ನೇರವಾಗಿ ನಾಮನಿರ್ದೇಶನಗೊಳ್ಳಲಿರುವುದರಿಂದ ಅವರು ಯಾವುದೇ ಚುನಾವಣೆ ಎದುರಿಸುವುದಿಲ್ಲ. ನಾಮ ನಿರ್ದೇಶನಗೊಂಡಿದ್ದ ಮಾಜಿ ಮೇಯರ್ ಪಿಆರ್ ರಮೇಶ್, ಚಲನಚಿತ್ರ ನಿರ್ಮಾಪಕ ಮೋಹನ್ ಕೊಂಡಜ್ಜಿ ಮತ್ತು ಸಾಮಾಜಿಕ ಕಾರ್ಯಕರ್ತ ಸಿ ಎಂ ಲಿಂಗಪ್ಪ ಮೇ-ಜೂನ್‌ನಲ್ಲಿ ಆರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ.
ಹೀಗಾಗಿ ಇವರ ಬದಲಿಗೆ ಮೂವರು ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಪರಿಷತ್ತಿನಲ್ಲಿ 11 ನಾಮನಿರ್ದೇಶಿತ ಸದಸ್ಯರಿದ್ದು, ಬಿಜೆಪಿಯಿಂದ ಸಿಪಿ ಯೋಗೇಶ್ವರ, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ, ಅಡಗೂರು ವಿಶ್ವನಾಥ ಮತ್ತು ತಳವಾರ ಸಾಬಣ್ಣ ಸೇರಿ ಐವರು ಇದ್ದಾರೆ. ಜೆಡಿಎಸ್‌ನ ಏಕೈಕ ಅಭ್ಯರ್ಥಿ ಕೆ.ಎ.ತಿಪ್ಪೇಸ್ವಾಮಿ. ಇನ್ನೂ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಮತ್ತು ಯುಬಿ ವೆಂಕಟೇಶ್ ನಾಮ ನಿರ್ದೇಶನಗೊಂಡ ಇಬ್ಬರು ಎಂಎಲ್ ಸಿ ಗಳಾಗಿದ್ದಾರೆ.
ಈ ನಾಮನಿರ್ದೇಶಿತ ಸದಸ್ಯರುಗಳೊಂದಿಗೆ ಮೂವರು ಕಾಂಗ್ರೆಸ್ ನಾಯಕರನ್ನು ಪರಿಷತ್ ಗೆ ಆಯ್ಕೆ ಮಾಡಲಾಗುತ್ತದೆ. ಜಗದೀಶ್ ಶೆಟ್ಟರ್, ಬೋಸ್ ರಾಜು ಮತ್ತು ಕಾಮಕನೂರ್ ತಿಪ್ಪನಪ್ಪ ಕಾಂಗ್ರೆಸ್ ನ ಎಂಎಲ್ ಸಿ ಅಭ್ಯರ್ಥಿಗಳಾಗಿದ್ದಾರೆ. ಪರಿಷತ್ತಿನಲ್ಲಿ ಕಾಂಗ್ರೆಸ್ ಸಂಖ್ಯೆಯು ಸದ್ಯ 23 ಇದೆ ಇವರುಗಳ ಆಯ್ಕೆಯಿಂದ 29 ಕ್ಕೆ ಏರುತ್ತದೆ. ಆದರೆ ಬಿಜೆಪಿಯು 34 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಉಳಿಯಲಿದೆ.
"ಕಾಂಗ್ರೆಸ್ ಸದನದ ಮೇಲೆ ಹಿಡಿತ ಸಾಧಿಸಲು ತಂತ್ರವನ್ನು ರೂಪಿಸಬೇಕು ಅಥವಾ ಮುಂದಿನ ಚುನಾವಣೆಯವರೆಗೆ ಕಾಯಬೇಕು, ಅದರ ಸಂಪೂರ್ಣ ಸಂಖ್ಯೆಯೊಂದಿಗೆ ಪರಿಷತ್ತಿನ ಹಿಡಿತ ಸಾಧಿಸಬೇಕು. ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾದಾಗ ಮಾತ್ರ ಪರಿಷತ್ತಿನಲ್ಲಿ ಅಧ್ಯಕ್ಷ ಹುದ್ದೆ ಪಡೆಯುತ್ತದೆ.
ಎಂ ಆರ್ ಸೀತಾರಾಮ್ ಅವರು ಮಾಜಿ ಸಚಿವ ಮತ್ತು ಮಲ್ಲೇಶ್ವರಂನ ಮಾಜಿ ಶಾಸಕರು. ಅವರು ಎಂಎಸ್ ರಾಮಯ್ಯ ಸಮೂಹ ಸಂಸ್ಥೆಗಳ ಭಾಗವಾಗಿದ್ದಾರೆ. ಶಿಕ್ಷಣತಜ್ಞರಾಗಿ ನಾಮನಿರ್ದೇಶನಗೊಳ್ಳುತ್ತಾರೆ.
ಮನ್ಸೂರ್ ಅಲಿ ಖಾನ್ ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು ಹತ್ತು ಶಾಲೆಗಳನ್ನು ನಡೆಸುತ್ತಿರುವ ಡಿಪಿಎಸ್‌ನ ಟ್ರಸ್ಟಿಯಾಗಿದ್ದಾರೆ. ಆಂಗ್ಲ ಪತ್ರಿಕೆಯೊಂದರ ಟ್ರಸ್ಟಿಯೂ ಆಗಿದ್ದಾರೆ. ಅವರನ್ನು ಶಿಕ್ಷಣತಜ್ಞ ಮತ್ತು ಪತ್ರಕರ್ತರ ಕೋಟಾ ಅಡಿ ನಾಮನಿರ್ದೇಶನ ಮಾಡಲಾಗುತ್ತದೆ. ಮಾಜಿ ಅಧಿಕಾರಿ ಸುಧಾಮ ದಾಸ್ ಅವರನ್ನು ಸಮಾಜ ಸೇವೆ ಕೋಟಾದಲ್ಲಿ ನಾಮನಿರ್ದೇಶನ ಮಾಡಲಾಗುತ್ತದೆ.