ತನ್ನಿಂದ ದೂರಾದ ಪ್ರೇಯಸಿಗೆ ಹಾಡಹಗಲೇ ಹಲವು ಬಾರಿ ಇರಿದು, ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ ಯುವಕ
ಕೋಲ್ಕತಾ: ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಗೇ ಹಾಡಹಗಲೇ ಹಲವು ಬಾರಿ ಇರಿದು ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ ಧಾರುಣ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಕೋಲ್ಕತಾದ ಸರ್ವೆ ಪಾರ್ಕ್ ಪ್ರದೇಶದಲ್ಲಿ 21 ವರ್ಷದ ಯುವತಿಯನ್ನು ಆಕೆಯ ಮಾಜಿ ಪ್ರಿಯಕರ ಮನಸೋ ಇಚ್ಚೆ ಇರಿದು ರಕ್ತದ ಮಡುವಿನಲ್ಲೇ ಆಕೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಪಕ್ಕದಲ್ಲೇ ಇದ್ದ ಅಜೋಯನಗರ ಕ್ರಾಸಿಂಗ್ ಬಳಿಯ ಸಂತೋಷ್‌ಪುರದ ಕೊಳಕ್ಕೆ ಆಕೆಯನ್ನು ಎಳೆದೊಯ್ದು ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ರಸ್ತೆಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಅಲ್ಲಿ ನೆರೆದಿದ್ದ ಜನರು ಮಾತ್ರ ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಾ ನಿಂತಿದ್ದಾರೆಯೇ ಹೊರತು ಯಾರೂ ಕೂಡ ಆತನನ್ನು ತಡೆಯುವ ಸಾಹಸ ಮಾಡಲಿಲ್ಲ.
ಬಳಿಕ ಪುರ್ಬಾ ಜಾದವ್‌ಪುರ ಟ್ರಾಫಿಕ್ ಗಾರ್ಡ್ ಜೋಯ್‌ಜೀತ್ ಸಹಾ ಮಧ್ಯಪ್ರವೇಶಿಸಿ ಯುವಕನನ್ನು ತಡೆದು ಪೊಲೀಸರಿಗೆ ಒಪ್ಪಸಿದ್ದಾರೆ. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಯು ಯುವತಿಯನ್ನು ಮಾತನಾಡಲು ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಮಾತಿನ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅದು ಜಗಳಕ್ಕೆ ತಿರುಗಿದೆ. ಇದರಿಂಕ ಆಕ್ರೋಶ ಗೊಂಡ ಯುವಕ ತಾನು ತಂದಿದ್ದ ಚಾಕು ತೆಗೆದು ಯುವತಿಗೆ ಮನಸೋ ಇಚ್ಚೆ ಇರಿದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಅವರು ಅದೇ ಪ್ರದೇಶದವರು ಎಂದು ತಿಳಿದುಬಂದಿದೆ ಮತ್ತು ಒಂದೆರಡು ತಿಂಗಳ ಹಿಂದೆ ಇಬ್ಬರಿಗೂ ಬ್ರೇಕಪ್ ಆಗುವ ಮೊದಲು ಅವರಿಬ್ಬರೂ ಪ್ರೀತಿಸುತ್ತಿದ್ದರು. ಬ್ರೇಕಪ್ ಬಳಿಕ ಆ ವ್ಯಕ್ತಿ ಅವಳನ್ನು ಭೇಟಿಯಾಗುವಂತೆ ಕೇಳಿಕೊಂಡನು. ಈ ವೇಳೆ ಮಾತನಾಡಲು ಬಂದ ಯುವತಿಗೆ ಆತ ಚಾಕು ಇರಿದ್ದು ಮಾತ್ರವಲ್ಲದೇ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಆಕೆಯನ್ನು ಮುಳುಗಿಸಲು ಕೊಳಕ್ಕೆ ಕರೆದೊಯ್ದಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿ ಸಮೀಪದ ಟ್ರಾಫಿಕ್ ಸಾರ್ಜೆಂಟ್ (ಟ್ರಾಫಿಕ್ ಪೊಲೀಸ್) ರಕ್ಷಣೆಗೆ ಬಂದರು ಮತ್ತು ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.
"ಆರೋಪಿಯು ತಾನು ಕಳೆದ ಮೂರು ವರ್ಷಗಳಿಂದ ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅವಳು ಸಂಬಂಧವನ್ನು ಮುಂದುವರಿಸಲು ಬಯಸಲಿಲ್ಲ. ಹೀಗಾಗಿ ಚಾಕುವಿನಿಂದ ಇರಿದೆ ಎಂದು ಹೇಳಿದ್ದಾನೆ. ಪ್ರಸ್ತುತ ಆತನನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.