ಭುವಿಯ ಕಾಡಿದೆ ನೆ#ತ್ತರು....!
Monday, January 30, 2023
ನೀನೊಬ್ಬ ಸಣಕಲು ದೇಹದ
ಮೊರಕಿವಿಯ ಅರೆನಗ್ನ ಫಕೀರ,
ಒಂದು ಕೋಲು,ಒಂದು ಕನ್ನಡಕ
ಒಂದು ಕೋಲು,ಒಂದು ಕನ್ನಡಕ
ಜೊತೆ ಚಪ್ಪಲಿ ಆತ್ಮ ಸುಂದರ.
ಕ್ಯಾರೆಟ್,ಟೊಮ್ಯಾಟೊ ಕಿತ್ತಳೆ ರಸ
ಮೇಕೆಹಾಲು ಬೇಯಿಸಿದ ತರಕಾರಿ,
ಲಿಂಬೆ ಜೇನು ಮಿಶ್ರಿತ ಬಿಸಿ ನೀರು
ತಿನ್ನುವುದಿಷ್ಟೇ ಬಹು ಮಿತಾಹಾರಿ.
ಊಟ, ನಿದ್ದೆ, ಮಾತು,ಮೌನ,ನಿತ್ಯ
ಕ್ರಮ ಬದ್ಧತೆಯ ಜೀವನ ವಿಧಾನ,
ಗೀತೆ, ಕುರಾನ್, ಬೈಬಲ್,ಗ್ರಂಥ
ಮನದ ಪ್ರಾರ್ಥನೆಯೇ ಪ್ರಧಾನ.
ಊದುಗಾಳಿಗೆ ಬೀಳುವ ದೇಹದಲಿ
ಬಿರುಗಾಳಿಯ ಬಗ್ಗಿಸುವ ಗುಂಡಿಗೆ,
ವಿರೋಧ ಕೇವಲ ವಿಚಾರಗಳಲಿ
ಸರ್ವರನು ಅಪ್ಪಿಕೊಳ್ಳುವ ಹೂನಗೆ.
ಉಪ್ಪು, ದಂಡು,ಅಸಹಕಾರ,ಸ್ವದೇಶಿ
ಎಷ್ಟು ಚಳುವಳಿಗಳಿಗೆ ಹೆಜ್ಜೆಯಾದೆ.
ಉಪವಾಸ,ಮೌನ,ಒತ್ತಡವ ಸಹಿಸಿ
ಸೆರೆಮನೆ ವಾಸಕ್ಕೂ ಸಾಕ್ಷಿಯಾದೆ.
ಅದಮ್ಯ ಹೋರಾಟದ ಭರದಲ್ಲಿ
'ಬಾ'ಜೊತೆ ನಡೆಸಿದ ರೀತಿಗೆ ಸಿಟ್ಟಿದೆ,
ರಾಷ್ಟ್ರಪಿತನಾದೆ ಸ್ವತಂತ್ರ ದೇಶದಲಿ
ಸ್ವ ಮಕ್ಕಳ ಕಡೆಗಣಿಸಿದೆ ಖೇದವಿದೆ.
ವಿದೇಶಿ ನಿರ್ಮಿತ ಗುಂ#ಡಿನ ಬಾಯಿಗೆ
ಸ್ವದೇಶಿಯಿಂದ ಬ#ಲಿಯಾಗಿ ಹೋದೆ,
ಜಗವೇ ಬಿಕ್ಕಿಳಿಸಿದೆ ದುರಂತ ಸಾ#ವಿಗೆ
ದೇಶ ಅನಾಥ,ನೀನು ಮಹಾತ್ಮನಾದೆ
ಬೆಳಕು ನೆರಳಿನ ನಿತ್ಯ ಬದುಕಿಗೆ
ಸೂರ್ಯ ಚಂದ್ರರ ಬಿಂಬ ರೂಪವು,
ಸತ್ಯ, ಧರ್ಮದ ನಿಸ್ವಾರ್ಥ ದಾರಿಗೆ
ಏಸು,ಬುದ್ಧ,ಗುರು ಪ್ರತಿಬಿಂಬವು.
ಅಹಿಂಸೆಗಾಗಿ ಸತ್ಯಾಗ್ರಹ ಮಾಡಿದೆ
ಹಿಂ#ಸೆಯಿಂದಲೇ ಕೊಂ#ದು ಬಿಟ್ಟರು,
ಹರಿದ ನೆ#ತ್ತರು ಭುವಿಯ ಕಾಡಿದೆ
ಬೆಳಕು ಆರದು ದೇಹ ಸುಟ್ಟರು.
ಉಷಾ.ಎಂ |