ಕಾರ್ಕಳ ಕ್ಷೇತ್ರವನ್ನು ಪ್ರಮೋದ್ ಮುತಾಲಿಕ್'ರಿಗೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಒತ್ತಾಯಿಸಿದ ಶ್ರೀರಾಮ ಸೇನೆ; ಬಿಟ್ಟುಕೊಡದಿದ್ದರೆ ನೀಡಿದ ಎಚ್ಚರಿಕೆ ಏನು ಗೊತ್ತೇ...?
ಧಾರವಾಡ(Headlines Kannada): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಕಾರ್ಕಳದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಶ್ರೀರಾಮ ಸೇನೆ ಬಿಜೆಪಿಯನ್ನು ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಶ್ರೀ ರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಹಿಂದುತ್ವದ ಸಲುವಾಗಿ ಕಾರ್ಕಳ ಕ್ಷೇತ್ರವನ್ನು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಬಿಟ್ಟು ಕೊಡಬೇಕು. ಬೇರೆ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಹಾಕಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಕಾರ್ಕಳ ಕ್ಷೇತ್ರವನ್ನು ಬಿಟ್ಟು ಕೊಡದಿದ್ದರೆ ಎಲ್ಲ ಕ್ಷೇತ್ರಗಲ್ಲಿ ಶ್ರೀ ರಾಮಸೇನೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಚುನಾವಣೆಗೆ ನಿಲ್ಲದಿದ್ದರೂ ಕೂಡ ಬಿಜೆಪಿಯ ಸುನಿಲ್ ಕುಮಾರ್ ಸೋಲುತ್ತಾರೆ. ಅಲ್ಲಿ 3 ಸಲ ಶಾಸಕರಾದವರು ಹಿಂದೂ ಕಾರ್ಯಕರ್ತರಿಗೆ ಏನೂ ಮಾಡಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರ ಮೇಲೆ ಬೇರೆ ಬೇರೆ ಕೇಸ್ ಹಾಕಿಸಿದ್ದಾರೆ. ಕಾರ್ಕಳದಲ್ಲಿ ಒಂದೇ ಒಂದು ಹಿಂದೂ ಸಮಾವೇಶ ಮಾಡಲು ಬಿಟ್ಟಿಲ್ಲ. ಸುನಿಲ್ ಕುಮಾರ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯನೇ ಇಲ್ಲ. ಈ ಬಾರಿ ಪ್ರಮೋದ್ ಮುತಾಲಿಕ್‌ರಿಗೆ ಬೆಂಬಲ ಕೊಟ್ಟು ಕ್ಷೇತ್ರ ಉಳಿಸಿಕೊಳ್ಳಬೇಕು. ಮುತಾಲಿಕರಿಗೆ ಅಲ್ಲಿನ ಜನ, ಕಾರ್ಯಕರ್ತರೇ ಸ್ವಯಂ ಪ್ರೇರಣೆಯಿಂದ ಬೆಂಬಲ ಕೊಡುತ್ತಿದ್ದಾರೆ ಎಂದು ಗಂಗಾಧರ ಕುಲಕರ್ಣಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮೋದ್ ಮುತಾಲಿಕ್ ಕೊಡುಗೆ ಬಹಳ ದೊಡ್ಡದು. ಒಂದು ವೇಳೆ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಿದ್ದೇ ಆದಲ್ಲಿ ನಾವು ಉಳಿದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಕುತ್ತೇವೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿ ಹಿಂದುತ್ವದ ಅಭ್ಯರ್ಥಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಬಿಜೆಪಿ ಪಕ್ಷ ಪ್ರಮೋದ್ ಮುತಾಲಿಕ್‌ರಿಗೆ ಬಹಳಷ್ಟು ಅವಮಾನ ಮಾಡಿದ್ದು, ಈಗಲಾದರೂ ಅದನ್ನು ಸುಧಾರಿಸಿಕೊಳ್ಳಬೇಕು ಎಂದರು.