ಸಂಘಪರಿವಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ನಟ ಚೇತನ್ ಅಹಿಂಸಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ
ಬೆಂಗಳೂರು: ಸಂಘಪರಿವಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಮಂಗಳವಾರ ಬಂಧನಕ್ಕೊಳಗಾದ ಕನ್ನಡದ ನಟ ಚೇತನ್ ಅಹಿಂಸಾ ಅವರಿಗೆ ಬೆಂಗಳೂರು 32ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಸಂಘಪರಿವಾರದ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಆರೋಪದ ಮೇಲೆ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಸಂಘಪರಿವಾರದ ಸಂಘಟನೆಗಳು ಚೇತನ್ ವಿರುದ್ಧ ದೂರು ನೀಡಿದ್ದವು. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಂಧಿಸಲಾಗಿತ್ತು.
ಇಂದು ಬೆಳಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಪೋಸ್ಟ್ ನಲ್ಲೇನಿದೆ ನೋಡಿ...
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ,
ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಇದು ಒಂದು ಸುಳ್ಳು,
1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’ ಇದು ಒಂದು ಸುಳ್ಳು,
ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು,
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು `ಸತ್ಯವೇ ಸಮಾನತೆ’ ಎಂದು ಚೇತನ್ ಬರೆದುಕೊಂಡಿದ್ದರು.