ಜರ್ಮನಿಯಿಂದ ಮಕ್ಕಾಗೆ 73 ದಿನಗಳ ಕಾಲ ಸೈಕಲಿನಲ್ಲಿ ಪ್ರಯಾಣ ಬೆಳೆಸಿದ್ದ ವ್ಯಕ್ತಿ; ಮಕ್ಕಾ ತಲುಪುತ್ತಿದ್ದಂತೆಯೇ ಸಾವು
Friday, March 3, 2023
ಮೆಕ್ಕಾ: ಜರ್ಮನಿಯಿಂದ ಮಕ್ಕಾಗೆ 73 ದಿನಗಳ ಕಾಲ ಸೈಕಲಿನಲ್ಲಿ ಪ್ರಯಾಣ ಬೆಳೆಸಿದ್ದ ಸಿರಿಯಾ ಮೂಲದ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿದ ಕೂಡಲೇ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಗಾಝಿ ಜಸ್ಸಿಮ್ ಶೆಹಾದೆಹ್ (53) ಎಂದು ಹೇಳಲಾಗಿದೆ. ಈತ ಸಿರಿಯಾ ಮೂಲದವನಾಗಿದ್ದು, ಜರ್ಮನಿಯಲ್ಲಿ ನೆಲೆಸಿದ್ದನು. ಸೈಕಲಿನಲ್ಲಿ ಜರ್ಮನಿಯಿಂದ ಮಕ್ಕಾಗೆ ಪ್ರಯಾಣಿಸಿ ಉಮ್ರಾ ನಿರ್ವಹಿಸುವ ಉದ್ದೇಶದಿಂದ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದನು. ತನ್ನ ಬೈಕ್ ಪ್ರಯಾಣವನ್ನು ಶೆಹಾದೆಹ್ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದ.
ಶೆಹಾದೆಹ್ ನಂಬಿಕೆ ಹಾಗು ಭಕ್ತಿಯನ್ನು ವ್ಯಕ್ತಪಡಿಸಲು ಮೆಕ್ಕಾಗೆ ತನ್ನ ಸೈಕಲ್ ಪ್ರಯಾಣದ ಯಾತ್ರೆಯನ್ನು ಪೂರ್ಣಗೊಳಿಸಲು ಬಯಸಿದ್ದ. ಮೆಕ್ಕಾದ ಪವಿತ್ರ ಮಸೀದಿಗೆ ಹೋಗುವ ದಾರಿಯಲ್ಲಿ ಗಾಝಿ ಜಸ್ಸಿಮ್ ಶೆಹಾದೆಹ್ ತನ್ನ ಅಂತಿಮ ಯಾತ್ರೆಯನ್ನು ಮುಗಿಸಿದ್ದಾನೆ. ಬಳಿಕ ಮೃತ ಗಾಝಿ ಜಸ್ಸಿಮ್ ಶೆಹಾದೆಹ್ ಅವರನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲಾಯಿತು.