
ನನ್ನ ಸಂಪೂರ್ಣ ಬೆಂಬಲ ಮೋದಿ ನೇತೃತ್ವದ BJP ಸರ್ಕಾರಕ್ಕೆ: ಸಂಸದೆ ಸುಮಲತಾ ಅಂಬರೀಷ್ ಘೋಷಣೆ
ಮಂಡ್ಯ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಂಸದೆ ಸುಮಲತಾ ಅಂಬರೀಷ್ ಅವರ ಮುಂದಿನ ನಡೆಗೆ ಕೊನೆಗೂ ತೆರೆಎಳೆದಿದ್ದಾರೆ. ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ BJP ಸರ್ಕಾರಕ್ಕೆ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಅಧಿಕೃತ ಬಾಹ್ಯ ಬೆಂಬಲ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ನಾನು ಪಕ್ಷೇತರ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ನಾನು ಜಾರಿಗೆ ತಂದಿದ್ದೇನೆ. ಈ ಎಲ್ಲ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರವೇ ನನಗೆ ಬೆಂಬಲ, ಕಾರಣ. ಈ ಹಿನ್ನೆಲೆಯಲ್ಲಿ ನಾನು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಈಗ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ, ನಾವು ಈಗ ಬಿಜೆಪಿ ಸೇರ್ಪಡೆಯಾದರೆ ಕೆಲವು ತಾಂತ್ರಿಕ ತೊಂದರೆಗಳಿವೆ. ಲೋಕಸಭಾ ಚುನಾವಣೆ ವೇಳೆ ನನಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು ಎಂದ ಅವರು, ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನೆಂದೂ ಮಾಡುವುದಿಲ್ಲ ಎಂದರು.
ತನ್ನ ಪುತ್ರನಿಗೆ ಕಾಂಗ್ರೆಸ್-ಬಿಜೆಪಿ ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದರೆ ನನ್ನ ಪುತ್ರ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಕಾಲಿಡಲ್ಲ, ತಾನು ಎಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತೇನೋ ಅಲ್ಲಿವರೆಗೂ ಅಭಿಷೇಕ್ ರಾಜಕಾರಣಕ್ಕೆ ಬರಲ್ಲ ಎಂದು ಸುಮಲತಾ ಅಂಬರೀಷ್ ಹೇಳಿದರು.