ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರಿಗೆ, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ: ಮತದಾನ ಮಾಡುವ ಬಗ್ಗೆ ನೀವು ಇದನ್ನು ತಿಳಿದುಕೊಳ್ಳಿ....
ನವದೆಹಲಿ: ಕರ್ನಾಟಕ ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಮತದಾನ ನಡೆಯಲಿದ್ದು, ಮೇ 10ರಂದು ಮತದಾನ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.
80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಹಾಸಿಗೆ ಬಿಟ್ಟು ಏಳಲಾಗದ ಪರಿಸ್ಥಿತಿಯಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.
ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಈ ಬಾರಿ ರಾಜ್ಯದಲ್ಲಿ ಅತಿ ಹಿರಿಯ ಮತದಾರರಿಗೆ ಅನುಕೂಲವಾಗುವಂತೆ ಹೊಸ ಪ್ರಯೋಗ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ 80 ವರ್ಷಕ್ಕೂ ಮೇಲ್ಪಟ್ಟ ಮತ್ತು ಅಂಗವಿಕಲ ಮತದಾರರು ಮನೆಗಳಿಂದಲೂ ಮತದಾನ ಮಾಡುವ ಸೌಲಭ್ಯವನ್ನು ನೀಡಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ವಿನಂತಿಸಿದರು.
ಕರ್ನಾಟಕ ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರು ಇದ್ದಾರೆ. ಇದರಲ್ಲಿ 12,15,763 ಮಂದಿ 80 ವರ್ಷ ಮೇಲ್ಪಟ್ಟವರು ಮತದಾರರು, 16,976 ಮಂದಿ 100 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ. ಇವರೆಲ್ಲರಿಗೂ ಈ ಬಾರಿ ಮನೆಯಿಂದ ಮತದಾನ ಮಾಡುವ ಅವಕಾಶ ನೀಡಲಾಗಿದೆ ಎಂದರು.
ಮನೆಯಿಂದಲೇ ಮತದಾನ ಮಾಡುವುದು ಹೇಗೆ....
-ಚುನಾವಣೆ ಆಯೋಗದ ವೆಪ್‌ಸೈಟ್, ವೋಟರ್ ಹೆಲ್ಪ್‌ಲೈನ್ ಅಥವಾ ಸಕ್ಷಮ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
-ಆಯಾಯ ಸ್ಥಳೀಯ ಬೂತ್ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲೂ ನೋಂದಣಿ ಮಾಡಿಸಲು ಅವಕಾಶ ಇದೆ.
-ನೋಂದಣಿ ಮಾಡಿಸಿಕೊಂಡ ಮತದಾರರ ಮನೆಗೆ ಮತದಾನ ಮಾಡಲು ಪೊಲೀಸ್ ಭದ್ರತೆಯಲ್ಲಿ ಅಂಚೆ ಮತಚೀಟಿ ರವಾನೆ
-ಮತದಾರರಿಗೆ ಮನೆಯಲ್ಲೇ ಗೌಪ್ಯ ಮತದಾನಕ್ಕೆ ಅವಕಾಶ, ಇಡೀ ಮತದಾನ ಪ್ರಕ್ರಿಯೆ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಲಾಗುವುದು.