ಬಿಜೆಪಿಯಿಂದ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟ ರಘುಪತಿ ಭಟ್; ಮುಂದಿನ ನಡೆ ಬಗ್ಗೆ ಹೇಳಿದ್ದೇನು...?
ಉಡುಪಿ(Headlines Kannada): ಈ ಬಾರಿ ಉಡುಪಿ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಕಣ್ಣೀರು ಹಾಕಿರುವ ಹಾಲಿ ಶಾಸಕ . ರಘುಪತಿ ಭಟ್ ತೀವ್ರ ಬೇಸರ ಹಂಚಿಕೊಂಡಿದ್ದು, ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ನನಗೆ ಬೇಸರವಿಲ್ಲ, ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ನೋವು ತಂದಿದೆ. ನಾನು ಯಾವ ಕಾರ್ಯಕರ್ತರನ್ನು ದಾರಿ ಮಧ್ಯೆ ಬಿಡುವುದಿಲ್ಲ ಎಂದ ಅವರು, ರೆಡ್ಡಿ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದು ಸೀಟ್ ಗಿಟ್ಟಿಸಿಕೊಳ್ಳುವವರು ಮಾಡುವ ಹುನ್ನಾರ ಎಂದು ಕಿಡಿಕಾರಿದರು.
ನನಗೆ ಈ ಬಾರಿ ಟಿಕೆಟ್ ಸಿಗಲ್ಲ ಎನ್ನುವ ಬಗ್ಗೆ ಕನಸು ಮನಸ್ಸಿನಲ್ಲಿ ಊಹೆ ಮಾಡಿರಲಿಲ್ಲ. ಇಲ್ಲಿ ಜಾತಿಯ ಕಾರಣಕ್ಕೆ ನನ್ನನ್ನು ಬದಲಾವಣೆ ಮಾಡುತ್ತಾರೆ ಎನ್ನುವ ಆಲೋಚನೆ ಇರಲಿಲ್ಲ. ನಾನು ಪಾರ್ಟಿಗೆ ಇಷ್ಟು ಬೇಗ ಬೇಡವಾದೆನೋ..? ನನಗೆ ಟಿಕೆಟ್ ಇಲ್ಲ ಎನ್ನುವುದು ಮಾಧ್ಯಮದಲ್ಲಿ ನೋಡಿ ತಿಳಿದುಕೊಳ್ಳಬೇಕೇ? ಚುನಾವಣೆಯಿಂದ ಹಿಂದೆ ಸರಿ ಎಂದು ಹೇಳುತ್ತಿದ್ದರೆ ನಾನೇ ಹಿಂದೆ ಸರಿಯುತ್ತಿದ್ದೆ ಎಂದರು.
ಉಡುಪಿ ಕ್ಷೇತ್ರದಲ್ಲಿ ಯಾವೊಬ್ಬ ಕಾರ್ಯಕರ್ತ ನಿಂತರು ಗೆಲ್ಲುವ ಸ್ಥಿತಿಗೆ ನಾನು ಪಕ್ಷವನ್ನು ತಂದು ನಿಲ್ಲಿಸಿದ್ದೇನೆ. ಇಲ್ಲಿ ನನ್ನ ಶ್ರಮವೇ ಕಾರಣ. ಟಿಕೆಟ್ ಕೈತಪ್ಪಿದ ನಂತರ ಪಕ್ಷದ ನಾಯಕರು, ಹಿರಿಯರು ಯಾರು ಕೂಡ ಸೌಜನ್ಯಕ್ಕಾದರೂ ಮಾತನಾಡಿಲ್ಲ ಎಂದು ಬೇಸರ ಹೊರಹಾಕಿದ ಭಟ್, ನನ್ನ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡಿಲ್ಲ ಎಂದರು.