ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಹೊಸಬರಿಗೆ ಬಿಜೆಪಿ ಟಿಕೆಟ್; ಜಾತಿ ಲೆಕ್ಕಾಚಾರದ ಮೂಲಕ ಹೊಸ ಪ್ರಯೋಗಕ್ಕಿಳಿದ ಬಿಜೆಪಿ
ಉಡುಪಿ(Headlines Kannada): ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಈಗ ವ್ಯಾಪಕವಾಗಿ ಹರಿದಾಡುತ್ತಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಏಕಾಏಕಿ ಈ ಬಾರಿಯ ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ ಈ ಬಾರಿ ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರದ ಮೂಲಕ ಹೊಸಮುಖಗಳಿಗೆ ಮಣೆಹಾಕಲು ಬಿಜೆಪಿ ಮುಂದಾಗಿದೆ.
2018ರ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದು, ಈ ಬಾರಿಯೂ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕಸರತ್ತು ಮುಂದುವರಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಶಾಸಕ, ಹಾಲಿ ಸಚಿವರೂ ಆಗಿರುವ ಸುನಿಲ್ ಕುಮಾರ್(ಬಿಲ್ಲವ) ಅವರನ್ನು ಬಿಟ್ಟು ಉಳಿದಂತೆ ಕಾಪು, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಉಡುಪಿಯಲ್ಲಿ ಈಗಿರುವ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕಾಪು ಕ್ಷೇತ್ರದಲ್ಲಿ ಹಾಲಿ ಶಾಸಕ, ಮೊಗವೀರ ಸಮುದಾಯದ ಲಾಲಾಜಿ ಆರ್.ಮೆಂಡನ್ ಅವರನ್ನು ಕೈಬಿಟ್ಟು ಬಂಟ(ಶೆಟ್ಟಿ) ಸಮುದಾಯದ ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಉಡುಪಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಬ್ರಾಹ್ಮಣ ಸಮುದಾಯದ ರಘುಪತಿ ಭಟ್ ಅವರಿಗೆ ಕೋಕ್ ನೀಡಿ ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್/ಯಶ್‍ಪಾಲ್ ಸುವರ್ಣ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಕುಂದಾಪುರ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ, ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆಯಿಂದ ಹಿಂದೆ ಸರಿದಿರುವುದರಿಂದ ಬ್ರಾಹ್ಮಣ ಸಮುದಾಯದ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಟಿಕೆಟ್ ಫೈನಲ್ ಆಗಿದೆ.
ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ, ಬಂಟ ಸಮುದಾಯದ ಸುಕುಮಾರ ಶೆಟ್ಟಿ ಅವರನ್ನು ಕೈಬಿಟ್ಟು ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೊಸಬರಿಗೆ ಮಣೆಹಾಕುವ ಮೂಲಕ ಹೊಸ ಪ್ರಯೋಗಕ್ಕಿಳಿದಿರುವ ಬಿಜೆಪಿ, ಈ ಬಾರಿಯೂ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.