ದೆಹಲಿಯಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟು ರಾಜ್ಯದ ಇತರ ನಾಯಕರೊಂದಿಗೆ ಸಭೆ ನಡೆಸಿದ ಬಿಜೆಪಿ; ಯಡಿಯೂರಪ್ಪ ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ: ಕಾಂಗ್ರೆಸ್ ಲೇವಡಿ
ಬೆಂಗಳೂರು: ದೆಹಲಿಯಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಬಿಜೆಪಿ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನ. ಯಡಿಯೂರಪ್ಪ ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಯಡಿಯೂರಪ್ಪರನ್ನು ಹೊರಗಿಟ್ಟು ಅಮಿತ್ ಶಾ, ನಡ್ಡಾ ಸಭೆ ನಡೆಸಿರುವ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಯಡಿಯೂರಪ್ಪರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ ? ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ? ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಬಿಜೆಪಿ ಯಡಿಯೂರಪ್ಪನವರ ಕಣ್ತಪ್ಪಿಸಿ, ದಿಕ್ಕು ತಪ್ಪಿಸಿ ಮೀಟಿಂಗ್ ಮಾಡ್ತಿರೋದೇಕೆ? ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನ ನೀಡಿದ್ದು ನಾಮಕಾವಸ್ಥೆಗೆ ಮಾತ್ರವೇ? BSYಗಿಂತ ಸಿ.ಟಿ ರವಿ, ಸಂತೋಷ್, ಪ್ರಹ್ಲಾದ್ ಜೋಷಿಯೇ ಮುಖ್ಯವಾದರೆ?
BSYಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಇಂತಹ ದಯನೀಯ ಸ್ಥಿತಿ BSYರಿಗೆ ಬರಬಾರದಿತ್ತು! ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿಗೆ ಹೋಗಿದ್ದ BSY ಅವರಂತಹ ಹಿರಿಯ ನಾಯಕರನ್ನು ದಿಕ್ಕು ತಪ್ಪಿಸಿ, ಅಲ್ಲಿ ಇಲ್ಲಿ ಅಲೆಸಿ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದರ ಹಿಂದಿನ ಕೈವಾಡ ಯಾರದ್ದು? ಅಮಿತ್ ಶಾರದ್ದೋ, ಪ್ರಹ್ಲಾದ್ ಜೋಷಿಯದ್ದೋ, ಬಿ.ಎಲ್ ಸಂತೋಷರದ್ದೋ, ಬೊಮ್ಮಾಯಿಯವರದ್ದೋ? ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ಮತಕ್ಕಾಗಿ ಮುಖ ತೋರಿಸಲು ಬೇಕಾದ BSY ಟಿಕೆಟ್ ನಿರ್ಧಾರಕ್ಕೆ ಬೇಡವಾದರೆ? ಎಂದು ಕೇಳಿದೆ.