ಚುನಾವಣೆಗೆ ಸ್ಪರ್ಧಿಸಲು ಭಿಕ್ಷೆ ಬೇಡಿ ಸಂಗ್ರಹಿಸಿದ್ದ 10 ಸಾವಿರ ರೂ.ಗಳ ನಾಣ್ಯಗಳನ್ನು ಠೇವಣಿಯಾಗಿ ಪಾವತಿಸಿದ ಅಭ್ಯರ್ಥಿ; ನಾಣ್ಯಗಳನ್ನು ಎಣಿಸಲು ಪರದಾಡಿದ ಅಧಿಕಾರಿಗಳು
ಯಾದಗಿರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಾಗಿ ಮನೆಮನೆ ಭಿಕ್ಷೆ ಬೇಡಿ ಸಂಗ್ರಹಿಸಿದ್ದ 10 ಸಾವಿರ ರೂ.ಗಳ ಒಂದು ರೂಪಾಯಿ ನಾಣ್ಯಗಳನ್ನು ಠೇವಣಿಯಾಗಿ ಪಾವತಿಸಿದ್ದು, ಈ ನಾಣ್ಯಗಳನ್ನು ಎಣಿಸುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿ ಹೆಸರು ಯಂಕಪ್ಪ ಭಿಕ್ಷೆ ಬೇಡಿ, ಪ್ರತೀ ಮನೆಯಿಂದ 1ರೂ.ನಂತೆ 10 ಸಾವಿರ ರೂ.ನಾಣ್ಯ ಸಂಗ್ರಹಿಸದ್ದರು. ಈ ನಾಣ್ಯಗಳನ್ನು ರೆವಣಿ ರೂಪದಲ್ಲಿ ನಾಮಪತ್ರ ಸಲ್ಲಿಕೆಯ ವೇಳೆ ಅಧಿಕಾರಿಗಳಿಗೆ ಪಾವತಿಸಿದ್ದಾರೆ. ಯಂಕಪ್ಪ ನೀಡಿರುವ ಹಣ ಎಣಿಸಲು ಅಧಿಕಾರಿಗಳು ಪರದಾಟ ನಡೆಸಬೇಕಾಯಿತು.
ಯಂಕಪ್ಪ ಕಳೆದ 1 ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ.
ಹಣ ಸಂಗ್ರಹಕ್ಕೆ ಭಿಕ್ಷೆ ಬೇಡುತ್ತಿದ್ದ ವೇಳೆ ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಯಂಕಪ್ಪ, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿದ್ದಾರೆ.