ಇನಾಯತ್ ಅಲಿ ಅಭಿಮಾನಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪೇಜ್ ಸೃಷ್ಟಿ; ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೂರು
Tuesday, May 9, 2023
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರ ಅಭಿಮಾನಿಗಳ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಪೇಜ್ ಸೃಷ್ಟಿಸಿ ವಿವಾದಾತ್ಮಕ ಪೋಸ್ಟ್‌ನ್ನು ಶೇರ್ ಮಾಡಿದ ಘಟನೆ ನಡೆದಿದೆ.
ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ಹಾಗೂ ಸೈಬರ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಅನಿಲ್ ಕುಮಾರ್ ದೂರು ನೀಡಿದರು.
"ವಿರೋಧ ಪಕ್ಷದ ಯಾರೋ ಕಿಡಿಗೇಡಿಗಳು ಸೋಲಿನ ಭಯದಿಂದ ಈ ದುಷ್ಕೃತ್ಯವನ್ನು ಮಾಡಿದ್ದಾರೆ. ನೇರವಾಗಿ ಎದುರಿಸಲಾಗದ ಹೇಡಿಗಳಿಗೆ ಅಪಪ್ರಚಾರ ಮಾತ್ರವೇ ಅಸ್ತ್ರ. ಕಿಡಿಗೇಡಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಚುನಾವಣಾಧಿಕಾರಿಗೆ ಆಗ್ರಹಿಸಿದ್ದೇವೆ" ಎಂದು ಅನಿಲ್ ಕುಮಾರ್ ತಿಳಿಸಿದರು.