ಉಡುಪಿ ಜಿಲ್ಲೆಯಲ್ಲಿ ಬಿರುಸಿನಿಂದ ನಡೆಯುತ್ತಿರುವ ಮತದಾನ: ತಮ್ಮ ಹಕ್ಕು ಚಲಾಯಿಸಿದ 5 ಕ್ಷೇತ್ರಗಳ ಅಭ್ಯರ್ಥಿಗಳು
ಉಡುಪಿ: ಇಂದು ನಡೆಯುತ್ತಿರುವ ವಿಧಾನ ಸಭಾ ಕ್ಷೇತ್ರಗಳ ಚುನಾವಣೆ ಮತದಾನ ರಾಜ್ಯಾದ್ಯಂತ ಬಿರುಸಿನಿಂದ ನಡೆಯುತ್ತಿದ್ದು, ಉಡುಪಿ ಜಿಲ್ಲೆಯ ಐದು ಕ್ಷೆತ್ರಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಮತ್ತಷ್ಟು ಚುರುಕು ಪಡೆದಿದೆ.
ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ತನ್ನ ಪತ್ನಿ ಜೊತೆಗೆ ಅಗಮಿಸಿ ಬಡಾನಿಡಿಯೂರು ಸನ್ಯಾಸಿ ಮಠದ ಬಳಿಯಿರುವ ಬೂತ್ ನಲ್ಲಿ ಮತ ಚಾಲಾಯಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ಪತ್ನಿ ಮತ್ತು ಮಗನೊಂದಿಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಅದೇ ರೀತಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಸೊರಕೆ ಮತ್ತು ಯಶ್ಪಾಲ್ ಸುವರ್ಣ ಮುಖಾಮುಖಿಯಾದರು. ಬಳಿಕ ಇವರು ಪರಸ್ಪರ ಹಸ್ತಲಾಘ ಮಾಡಿಕೊಂಡರು. ಉಡುಪಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರಭಾಕರ ಪೂಜಾರಿ ಅವರು ತಮ್ಮ ಪತ್ನಿ, ಮಗಳೊಂದಿಗೆ ಬಂದು ಮತದಾನ ಮಾಡಿದರು.
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಅವರ ಮತ ಕ್ಷೇತ್ರ ಕಾಪುವಿನ ಕಳತ್ತೂರಿನ ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆ ಬೂತ್ ನಂ 156 ರಲ್ಲಿ ಮತದಾನ ಮಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜಘಂಟಿಹಳೆ ಸಾರಥಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಪತ್ನಿ ಹಾಗೂ ಕುಟುಂಬಿಕರೊಂದಿಗೆ ಆಗಮಿಸಿ ಕನ್ಯಾನ ಶಾಲೆಯ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ತಮ್ಮ ಬೆಂಬಲಿಗರೊಂದಿಗೆ ತೆರಳಿ ಮತ ಚಲಾಯಿಸಿದರು.
ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ ಅವರು ನಿಟ್ಟೆ ಗ್ರಾಮದ ಕಲಂಬಾಡಿ ಪದವು ಶಾಲೆ ಬೂತ್ ಸಂಖ್ಯೆ 140 ರಲ್ಲಿ ಮತದಾನ ಮಾಡಿದರು.
ಕನ್ಯಾನ ಮತಗಟ್ಟೆಯ ಇವಿಎಂ ಯಂತ್ರದ ಬಳಿ ಬೆಳಕಿನ ಕೊರತೆ ಇದ್ದ ಕಾರಣ, ಯಂತ್ರದಲ್ಲಿನ ಹೆಸರು, ಚಿಹ್ನೆ ಅಸ್ಪಷ್ಟ ಕಾಣಿಸುತ್ತಿದೆ ಎಂದು ಅಭ್ಯರ್ಥಿ ಗೋಪಾಲ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಎಂದು ತಿಳಿದುಬಂದಿದೆ.