ದೆಹಲಿ ಪೊಲೀಸರ ದೌರ್ಜನ್ಯ; ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ ಕುಸ್ತಿಪಟುಗಳು

ದೆಹಲಿ ಪೊಲೀಸರ ದೌರ್ಜನ್ಯ; ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ ಕುಸ್ತಿಪಟುಗಳು

ನವದೆಹಲಿ: ದೆಹಲಿ ಪೊಲೀಸರ ದೌರ್ಜನ್ಯದಿಂದ ಮನನೊಂದ ಪ್ರತಿಭಟನಾನಿರತ ಕುಸ್ತಿಪಟುಗಳು ಗುರುವಾರ ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದು, ನಮಗೆ ಈ ರೀತಿ ಅಗೌರವ ತೋರಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕುಸ್ತಿಪಟುಗಳು ಮಲಗಲು ಮಂಚಗಳನ್ನು ತಂದಾಗ ಗಲಾಟೆ ಪ್ರಾರಂಭವಾಯಿತು. ನಿಯಮಾನುಸಾರ ಪ್ರದರ್ಶನ ನಡೆಯುವ ಸ್ಥಳದಲ್ಲಿ ಅಂತಹ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ಅದರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು. ಈ ವೇಳೆ ಪುರುಷ ಪೊಲೀಸ್ ಅಧಿಕಾರಿಗಳು ತಮ್ಮನ್ನು ತಳ್ಳಾಡಿದರು, ನಿಂದಿಸಿದರು ಎಂದು ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಈ ಗಲಾಟೆಯಲ್ಲಿ ಸಂಗೀತಾ ಫೋಗಟ್ ಸಹೋದರ ದುಶ್ಯಂತ್ ಸೇರಿದಂತೆ ಇಬ್ಬರು ಕುಸ್ತಿಪಟುಗಳಿಗೆ ಗಾಯಗಳಾಗಿವೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ. ಇದು ಹೀಗೆ ಮುಂದುವರೆದರೆ ನಾವು ನಮ್ಮ ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ಬಳಿಕ ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದರು.

ವಿನೇಶ್, ಸಾಕ್ಷಿ ಮತ್ತು ಬಜರಂಗ್ ಮೂವರೂ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯ ಖೇಲ್ ರತ್ನ ಸ್ವೀಕರಿಸಿದ್ದಾರೆ. ಸಾಕ್ಷಿ(2017) ಮತ್ತು ಬಜರಂಗ್(2019) ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

'ಪೊಲೀಸರು ನಮ್ಮನ್ನು ತಳ್ಳಾಡುವಾಗ, ನಿಂದಿಸುವಾಗ, ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದಾಗ, ನಾವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಎಂದು ಅವರು ನೋಡಿಲ್ಲ. ನಾನು ಮಾತ್ರವಲ್ಲದೆ ಸಾಕ್ಷಿ ಮಲಿಕ್ ಕೂಡ ಇಲ್ಲಿದ್ದರು. ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಬೀದಿಗಳಲ್ಲಿ ಕುಳಿತು ಕರುಣೆಗಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23ರಿಂದ ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳು ಮತ್ತೆ ಮುಷ್ಕರ ನಡೆಸುತ್ತಿದ್ದಾರೆ. ಇನ್ನು ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article