ಬಂಧಿಸಿದ ಕುಸ್ತಿಪಟುಗಳ ಫೋಟೋ ತಿರುಚಿದ ಕಿಡಿಗೇಡಿಗಳು: ಹೃದಯನೇ ಇಲ್ಲ ಅನಿಸುತ್ತದೆ...ಹೀಗೆ ಮಾಡಲು ನಾಚಿಕೆ ಆಗ್ವಲ್ಲಾ: ಸಾಕ್ಷಿ ಮಲ್ಲಿಕ್, ಉರ್ಫಿ ಜಾವೆದ್ ಕಿಡಿ
ನವದೆಹಲಿ: ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಮಧ್ಯೆ ರವಿವಾರ ಪ್ರತಿಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಬಂಧಿಸಿ, ಎಫ್ ಐಆರ್ ಕೂಡಾ ದಾಖಲಾಗಿದೆ.
ಇದೇ ವೇಳೆ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಪೊಲೀಸ್ ವಾಹನದಲ್ಲಿ ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಕಿಡಿಕಾರಿರುವ ಸಾಕ್ಷಿ ಮಲ್ಲಿಕ್, ಹೀಗೆ ಮಾಡಲು ನಾಚಿಕೆ ಆಗ್ವಲ್ಲಾ,ದೇವರು ಹೇಗೆ ಇಂತಹ ಜನರನ್ನು ಸೃಷ್ಟಿಸಿದ ಪ್ರಶ್ನಿಸಿದ ಅವರು, ವಿಚಲಿತರಾದ ಯುವತಿಯರ ಮುಖಕ್ಕೆ ನಗುತ್ತಿರುವ ಫೋಟೋವನ್ನು ಅಂಟಿಸಲಾಗಿದೆ. ಅವರಿಗೆ ಹೃದಯನೇ ಇಲ್ಲ ಅನಿಸುತ್ತದೆ. ನಮ್ಮ ಅಪಖ್ಯಾತಿಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿನ್ನೆಯ ಪರಿಸ್ಥಿತಿ ಹದಗೆಟ್ಟಿತ್ತು. ಶಾಂತಿಯುತವಾಗಿ ಮೆರವಣಿಗೆ ಮಾಡಲು ಬಯಸಿದ್ದೆವು ಆದರೆ ಹಾಗೆ ಮಾಡಲು ನಮ್ಮನ್ನು ಬಿಡಲಿಲ್ಲ. ಜಂತರ್ ಮಂತರ್‌ನಿಂದ ಬಲಕ್ಕೆ ಬ್ಯಾರಿಕೇಡ್ ಇತ್ತು. ನಮ್ಮನ್ನು ಹಿಂದಕ್ಕೆ ತಳ್ಳಲು ಪ್ರಾರಂಭಿಸಿದ ಪೊಲೀಸರು ಬಂಧಿಸಿದರು. ನಂತರ ಬಸ್ ಗಳಿಗೆ ಎಳೆದೊಯ್ದರು. ನಾವು ಯಾವುದೇ ಹಿಂಸಾಚಾರ ಮಾಡಿಲ್ಲ, ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿಲ್ಲ ಎಂದು ಅವರು ಹೇಳಿದರು.
ದೆಹಲಿ ಪೊಲೀಸರು ಭಾನುವಾರ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಸೇರಿದಂತೆ 700 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಕುಸ್ತಿಪಟುಗಳ ತಿರುಚಿದ ಫೋಟೋಕ್ಕೆ ಬಾಲಿವುಡ್ ನಟಿ ಉರ್ಫಿ ಜಾವೇದ್ ಕೂಡಾ ಕಿಡಿಕಾರಿದ್ದಾರೆ. ಜನರು ತಮ್ಮ ಸುಳ್ಳುಗಳನ್ನು ಸಾಬೀತುಪಡಿಸಲು ಏಕೆ ಈ ರೀತಿಯ ಫೋಟೋ ಹಾಕುತ್ತಾರೋ ಎಂದು ವಾಗ್ದಾಳಿ ನಡೆಸಿದ್ದಾರೆ.