ಬೆಂಗಳೂರಿನಲ್ಲಿ ಭಾರೀ ಮಳೆ; ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್'ನಲ್ಲಿ ಸಿಲುಕಿ ಮಹಿಳೆಯ ಸಾವು; 5 ಲಕ್ಷ ರೂ.ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರಿನಾದ್ಯಂತ ಭಾನುವಾರ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆಯಾಗಿದ್ದು, ಸುರಿದ ವಿಪರೀತ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನಗರದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ವಿದ್ಯುತ್ ಕಂಬಗಳು, ಮರಗಳು ರಸ್ತೆ ಬಿದ್ದಿವೆ. ಮಳೆಯ ಪರಿಣಾಮ ಜಲಾವೃತಗೊಂಡ ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್ ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಂಡರ್ ಪಾಸ್ ನಲ್ಲಿ ಮುಳುಗಡೆಯಾಗಿದ್ದ ಕಾರಿನಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು, ಘಟನೆಯಲ್ಲಿ ಮಗು ಕಾಣೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಈ ನಡುವೆ ಅಸ್ವಸ್ಥಗೊಂಡಿದ್ದ ಮಹಿಳೆ 23 ವರ್ಷದ ಭಾನುರೇಖಾ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಂಟ್ ಮಾರ್ಥಾಸ್ ಗೆ ಭೇಟಿ ನೀಡಿದ್ದು, ಮಹಿಳೆ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಮೃತ ಮಹಿಳೆ ಕುಟುಂಬದವರು ಬೆಂಗಳೂರು ನೋಡಲು ವಿಜಯವಾಡದಿಂದ ಆಗಮಿಸಿದ್ದರು. ಇನ್ನು ಮಳೆಯ ಅವಾಂತರಕ್ಕೆ ಚಿಕ್ಕಮಗಳೂರಿನ ಮೂಡಿಗೆರೆಯ ಚಿಕ್ಕಳ್ಳ ಬಳಿ ಓರ್ವ ಬೈಕ್ ಸವಾರ ಬೃಹತ್ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರದಲ್ಲಿ ಧಾರಾಕಾರ ಮಹಿಳೆಯ ಪರಿಣಾಮ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ವಾಹನಗಳು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.