ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ಸರಕಾರ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇನ್ನೇನು ಹೇಳಿದ್ದಾರೆ ನೋಡಿ...
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಇಂದು (ಮೇ.30) ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ನಮ್ಮ ಪ್ರಣಾಳಿಕೆಯಲ್ಲಿ APL, BPL ಕಾರ್ಡ್ದಾರರು ಎಂದು ಹೇಳಿಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಣೆ ಮಾಡಿದರು. ಇದರೊಂದಿಗೆ ಕಾಂಗ್ರೆಸ್ನ 5 ಗ್ಯಾರೆಂಟಿಗಳಲ್ಲಿ ಒಂದು ಈಡೇರಿದಂತಾಗಿದೆ.
ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಾರಿಗೆ ನಿಗಮಗಳ ಎಂಡಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯ ವರದಿ ಸಲ್ಲಿಸುತ್ತೇವೆ. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ನಿನ್ನೆ (ಮೇ.29) ಸಿಎಂ ಸಿದ್ದರಾಮಯ್ಯನವರು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿಸಿದರು.
ಕೊರೋನಾ ಸಂದರ್ಭದಲ್ಲಾದ ನಷ್ಟದ ಬಗ್ಗೆ ಚರ್ಚೆ ನಡೆಸಿದ್ದೇನೆ. ನಮ್ಮ ಸಾರಿಗೆ ಇಲಾಖೆ ದೇಶದಲ್ಲೇ ಪ್ರತಿಷ್ಠಿತ ಸಂಸ್ಥೆಯಾಗಿದೆ. 4 ಸಾರಿಗೆ ನಿಗಮಗಳಿಗೆ 350ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. 4 ಸಾರಿಗೆ ನಿಗಮಗಳಲ್ಲಿ 240 ಘಟಕಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 23,978 ವಾಹನಗಳಿವೆ, 1,04,450 ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ನಿತ್ಯ ರಾಜ್ಯಾದ್ಯಂತ 82,51 ಲಕ್ಷ ಪ್ರಯಾಣಿಕರು ಓಡಾಡ್ತಾರೆ. ನಾಲ್ಕು ನಿಗಮಗಳ ನಿತ್ಯದ ಒಟ್ಟು ಆದಾಯ 2,31,332 ಲಕ್ಷ ರೂ. ಇದೆ ಎಂದು ತಿಳಿಸಿದ್ದಾರೆ.