ಭಾರಿ ಮಳೆ ಗಾಳಿಗೆ ಮಜೂರು ಮಸೀದಿ ಬಳಿ ಚಲಿಸುತ್ತಿದ್ದ ರಿಕ್ಷಾವೊಂದರ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಪ್ರಯಾಣಿಕರಿಬ್ಬರು ಸಾವು
ಕಾಪು: ಮಜೂರು ಮಸೀದಿ ಬಳಿ ಶುಕ್ರವಾರ ಸುರಿದ ಭಾರಿ ಮಳೆ ಗಾಳಿಗೆ ಚಲಿಸುತ್ತಿದ್ದ ರಿಕ್ಷಾವೊಂದರ ಮೇಲೆ ಬೃಹತ್ ಮರವೊಂದು ಬಿದ್ದು, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಪ್ರಯಾಣಿಕರನ್ನು ಶಿರ್ವ ಶಾಂತಿಗುಡ್ಡೆಯ ಕೃಷ್ಣಾ ಹಾಗು ಪುಷ್ಪ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಾಪುವಿನಿಂದ ಪಾದೂರಿಗೆ ರಿಕ್ಷಾ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದೆ.
ಶುಕ್ರವಾರ ರಾತ್ರಿ 7 ಘಂಟೆ ಸುಮಾರಿಗೆ ಒಮ್ಮೆಲೇ ಸುರಿದ ಮಳೆ, ಮಿಂಚು, ಸಿಡಿಲು ಹಾಗು ಭಾರಿ ಗಾಳಿಗೆ ಹಲವು ಕಡೆ ಮರಗಳು ಧರೆಗುರುಳಿವೆ. ಇದೇ ವೇಳೆ ಕಾಪುವಿನಿಂದ ತಮ್ಮ ಮನೆಗೆ ಕೃಷ್ಣಾ ಹಾಗು ಪುಷ್ಪ ಅವರು ಉಳಿಯರಗೋಲಿನ ಶರೀಫ್ ಎಂಬರ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ರಿಕ್ಷಾ ಮಜೂರಿನ ಮಸೀದಿ ಬಳಿ ಹೋಗುತ್ತಿದ್ದಂತೆ ಬೃಹತ್ ಗಾತ್ರದ ಮರವೊಂದು ರಿಕ್ಷಾ ಮೇಲೆ ಉರುಳಿಬಿದ್ದಿದೆ. ರಿಕ್ಷಾದ ಹಿಂಬದಿಯಲ್ಲಿ ಕುಳಿತಿದ್ದ ಕೃಷ್ಣಾ ಹಾಗು ಪುಷ್ಪ ಮೇಲೆ ಮರ ಬಿದ್ದಿದೆ. ಈ ವೇಳೆ ಅವರಿಬ್ಬರೂ ಸ್ಥಳದಲ್ಲಿಯೇ ಕೊನೆಯುಸಿರೆಳೆಯಿದ್ದಾರೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ರಿಕ್ಷಾದಿಂದ ಹೊರತೆಗೆಯಲು ಕಾಪು ಪೊಲೀಸರು, ಅಗ್ನಿಶಾಮಕದಳ ಹಾಗು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಇದೇ ವೇಳೆ ದಿನೇಶ್ ಎಂಬರ ರಿಕ್ಷಾದ ಮೇಲೆಯೂ ಮರಬಿದ್ದಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.