ಬೇಕಲ್ ಉಸ್ತಾದರ ಪಡಿಯಚ್ಚು ಈ ಅಬ್ದುಲ್ ಜಲೀಲ್!

ಬೇಕಲ್ ಉಸ್ತಾದರ ಪಡಿಯಚ್ಚು ಈ ಅಬ್ದುಲ್ ಜಲೀಲ್!

- ಡಿ. ಐ. ಅಬೂಬಕರ್ ಕೈರಂಗಳ

ಜಲೀಲ್ ಮೋಂಟುಗೋಳಿ  ಇಂದು ಮಂಗಳೂರು ತಾಲೂಕು ಮತ್ತು ಆಸುಪಾಸಿನಲ್ಲಿ ಸುಪರಿಚಿತ ಹೆಸರು.  ಕರ್ನಾಟಕದ ಮುಸ್ಲಿಮ್ ವಿದ್ವತ್ಜಗದ ಇತಿಹಾಸ ಮರ್ಹೂಮ್ ಬೇಕಲ್ ಉಸ್ತಾದರ ಸುಪುತ್ರ ಎಂಬ ಸ್ವಾಭಾವಿಕ ಗೌರವಾದರದ ಜೊತೆಗೆ ಜಲೀಲ್ ಅವರ ವೈಯಕ್ತಿಕ ವರ್ಚಸ್ಸು ಹಾಗೂ ಜೀವನದ ಯಶಸ್ಸು ಅವರ ಜನಾದರಣೆಯನ್ನು ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕನಾಗಿ ಮಿಂಚುತ್ತಿರುವ ಇವರು ಉದ್ಯಮ ರಂಗದಲ್ಲೂ ಮೇಲೇರಿ ಉತ್ತಮ ಆರ್ಥಿಕ ನೆಲೆಯನ್ನೂ ಕಂಡಿದ್ದಾರೆ. 

ಇವತ್ತು ಅವರ ಮನೆಗೆ ಹೋಗಿದ್ದೆ. ಜಲೀಲ್ ಅವರು ಆಕೃತಿ ಹಾಗೂ ರೂಪದಲ್ಲಿ ತಂದೆಯವರಿಗೆ  ಹೋಲುವುದರೊಂದಿಗೆ ಮಾತು ಕೂಡಾ ತಂದೆಯವರ ಹಾಗೆ ಬಹಳ ತೂಕವುಳ್ಳದ್ದಾಗಿದೆ. ಮಿತಮಾತು ಬುದ್ಧಿವಂತರ ಲಕ್ಷಣ ಎಂಬುದಕ್ಕೆ ಉದಾಹರಣೆಯಂತಿರುವ ಇವರು  ಸ್ವಭಾವತಃ ಮಿತಭಾಷಿ.  ಆದರೆ ಆತ್ಮೀಯರೊಡನೆ ಮಾತಿಗಿಳಿದರೆ ತುಂಬಾ ಮಾತಾಡುತ್ತಾರೆ. ಆ ಮಾತುಗಳಲ್ಲಿ ಜಳ್ಳು ಇರುವುದಿಲ್ಲ‌‌. ಎಲ್ಲವೂ ತೂಕದ ಮಾತುಗಳು. ಪ್ರಖರ ಚಿಂತನೆಯಿಂದ ಮೂಡಿಬರುವ ಅರ್ಥ ಗರ್ಭಿತ ನುಡಿಗಳು. 

ಜಲೀಲ್ ರವರ ಹೃದಯ ಮಿಡಿತ ಯಾವಾಗಲೂ ಸಮಾಜಪರ.  ಸಾಮಾಜಿಕ ನ್ಯಾಯ, ಸಾಮಾಜಿಕ ಮುನ್ನಡೆಗಳ ಬಗ್ಗೆ, ಸಮಾಜ ಸುಧಾರಣೆಯ ಸಾಧ್ಯತೆಗಳ ಬಗ್ಗೆ ಮಾತನಾಡುತ್ತಾರೆ. ಇವತ್ತು ನಾವು ಮಾತಾಡುತ್ತಾ ಆರೋಗ್ಯದ ವಿಷಯ ಬಂದಾಗ ಜಲೀಲ್ ಪಕ್ಕಾ ದಾರ್ಶನಿಕರಾದರು. ಉಡುಪಿ ಜಿಲ್ಲೆಯಲ್ಲೊಬ್ಬ ಸಾವಿರಾರು ಕೋಟಿಗಳ ಒಡೆಯನಿಗೆ ಮಕ್ಕಳಿಲ್ಲ, ಮಂಗಳೂರಿನ ಹೆಸರಾಂತ ಉದ್ಯಮಿಯೊಬ್ಬರಿಗೆ ಆಸ್ಪತ್ರೆಗಳಿವೆ, ಎಲ್ಲವೂ ಇವೆ, ಆದರೆ ಅದೇ ವ್ಯಕ್ತಿ  ತನ್ನ  ಅನಾರೋಗ್ಯದ ದೆಸೆಯಿಂದ  ನಮಾಝ್ ನಲ್ಲಿ ಸುಜೂದ್ ಮಾಡಲು ಪಾಡುಪಡಬೇಕಾಗುತ್ತದೆ. ಅದೇ ಉದ್ಯಮಿಯ ಫ್ಯಾಮಿಲಿಯ ಮತ್ತೊಬ್ಬರಿಗೆ ಮಕ್ಕಳಿಲ್ಲ, ಮತ್ತೆ ಈ ದುನ್ಯಾದಲ್ಲಿ ನಾವು ಎಷ್ಟೇ ಸಂಪಾದಿಸಿದರೂ ಏನು ಫಲ? 

ನನ್ನ ಆಪ್ತಮಿತ್ರ ವಲಯದಲ್ಲಿ ಒಬ್ಬರಾಗಿರುವ ಜಲೀಲ್ ನನ್ನ ಹಿತೈಷಿ ಕೂಡಾ. ನನ್ನ ಸಾಹಿತ್ಯದ ಬಗ್ಗೆ ಅಭಿಮಾನ ಇಟ್ಟವರು. ನನ್ನ ದಿನನಿತ್ಯದ ನೀತಿಮಾತು "ಶುಭ ಮುಂಜಾನೆ" ಯ ಖಾಯಂ ಓದುಗರಲ್ಲಿ ಇವರೂ ಒಬ್ಬರು. ಈ ವಿಷಯವೂ ಇಂದಿನ ನಮ್ಮ ಮಾತುಕತೆಯಲ್ಲಿ ಬಂದಿತ್ತು

" ನೀವು ತುಂಬಾ ಸಾಹಿತ್ಯ ಸೇವೆಯಲ್ಲಿ ನಿರತರಾಗಿ ಭೌತಿಕವಾಗಿ ಏನೂ ಗಳಿಸಿರಲಿಲ್ಲ, ಆದರೆ ಈಗ ನೀವು ಉದ್ಯಮದಲ್ಲಿ ಮುಂದೆ ಬರತೊಡಗಿದ್ದು ಸಂತೋಷ" ಎಂದವರು ನನ್ನ ಕುರಿತು  ಹೇಳುವಾಗ ತುಂಬ ಸಂತೋಷವಾಗಿತ್ತು.

ಜಲೀಲ್ ರವರ ಅಣ್ಣ ಸ್ವಾಲಿಹ್ ರವರು ಉದ್ಯಮದಲ್ಲಿ ನನ್ನ ಜೊತೆಗಿದ್ದಾರೆ. ತಮ್ಮ ಸಅದಿ ಪದವೀಧರನಾಗಿದ್ದು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.  ಈ ಸಂತುಷ್ಟ ಕುಟುಂಬದ ವಿಜಯದಲ್ಲಿ ಬೇಕಲ್ ಉಸ್ತಾದರು ಮಕ್ಕಳಿಗಾಗಿ ಮಾಡಿದ್ದ ದುಆದ ಪಾತ್ರ ಇದ್ದೇ ಇದೆ. 

ಉನ್ನತ ಮಟ್ಟದಲ್ಲಿದ್ದರೂ ಜಲೀಲ್ ರವರ ವಿನಯ ಸ್ವಭಾವ ಅವರ ವ್ಯಕ್ತಿತ್ವಕ್ಕೆ ಶೋಭೆ ತಂದಿದೆ. ಎಲ್ಲಾ ಸ್ತರದ ಜನರೊಡನೆ ಸಹಜವಾಗಿ, ಸರಳವಾಗಿ, ಆತ್ಮೀಯವಾಗಿ ಬೆರೆಯುತ್ತಾರೆ. 

ಅಲ್ಲಾಹು ದೀರ್ಘಾಯುಷ್ಯ ನೀಡಲಿ. ಇನ್ನಷ್ಟು ಬರಕತ್ ನೀಡಲಿ. ಇವರ  ನಾಲ್ಕು ಗಂಡು ಮಕ್ಕಳ ಸಂತುಷ್ಟ ಕುಟುಂಬ ಸುಖ ಸಮೃದ್ಧಿಯಿಂದ ಮುಂದುವರಿಯಲಿ ಎಂದು ಆತ್ಮಾರ್ಥವಾಗಿ ಪ್ರಾರ್ಥಿಸುತ್ತಿದ್ದೇನೆ.

Ads on article

Advertise in articles 1

advertising articles 2

Advertise under the article