ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಗೆ ಇನ್ನು ಮುಂದೆ ಅವಕಾಶ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಗೆ ಇನ್ನು ಮುಂದೆ ಅವಕಾಶ ಇಲ್ಲ. ಈ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಖಡಕ್ ಎಚ್ಚರಿಕೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 2023ನೇ ಸಾಲಿನ ಹಜ್ ವಿಮಾನಯಾನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲ್ಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಕಾನೂನಿನ ಆಡಳಿತ ಜಾರಿಯಲ್ಲಿದೆ. ಇದು ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಿರುವುದರಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದರು.
ಪೌರಾಡಳಿತ ಮತ್ತು ಹಜ್ ಸಚಿವ ರಹಿಮ್ ಖಾನ್ ಮಾತನಾಡಿ, ಜೂ.7ರಂದು ಮುಂಜಾನೆ 4:45ಕ್ಕೆ ಹಜ್‌ಯಾತ್ರಿಗಳ ಮೊದಲ ವಿಮಾನ ಹಾರಾಟ ಮಾಡಲಿದ್ದು, ಅಂದು ತಲಾ 150 ಯಾತ್ರಿಗಳನ್ನು ಒಳಗೊಂಡ 5 ವಿಮಾನಗಳು ತೆರಳಲಿವೆ. ನಂತರದ ದಿನಗಳಲ್ಲಿ ತಲಾ 3 ವಿಮಾನಗಳು ತೆರಳಲಿವೆ. ಜೂ.22ರಂದು ಅಂತಿಮ ದಿನ 4 ವಿಮಾನಗಳು ತೆರಳಲಿವೆ. ಹೀಗೆ ಒಟ್ಟು 51 ವಿಮಾನಗಳು ತೆರಳಲಿವೆ ಎಂದು ಮಾಹಿತಿ ನೀಡಿದರು.
ಬೀದರ್ ಹಾಗೂ ಗುಲ್ಬರ್ಗ ಭಾಗದ ಯಾತ್ರಿಗಳು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ತೆರಳಲಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಅಮೀರೇ ಶಿರಿಯತ್ ಕರ್ನಾಟಕದ ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಸಾಹೆಬ್ ಮತ್ತು ವಿಜಯಪುರದ ಅಲ್ ಹಶ್ಮಿ ಟ್ರಸ್ಟ್ ಅಧ್ಯಕ್ಷರಾದ ಮೌಲಾನಾ ಮಫ್ತಿ ಇಫ್ತಿಕಾರ್ ಅಹಮದ್ ಖಶ್ಮಿ ಸಾಹೆಬ್, ಕಂದಾಯ ಸಚಿವ ಕೃಷ್ಣ ಬೈರೇ ಗೌಡ, ವಸತಿ, ಹಜ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ BZ ಝಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಹಾಜರಿದ್ದರು.