ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ನೋಟಿಸ್ ಜಾರಿ ಮಾಡಿರುವ ಪೊಲೀಸ್ ಇಲಾಖೆ
ಬೆಂಗಳೂರು: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸಂಘಪರಿವಾರದ ಸಂಘಟನೆಯಾಗಿರುವ ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ನಿರ್ಧರಿಸಿರುವ ಖಾಕಿ ಪಡೆಯು ಪುನೀತ್‌ಗೆ ತಿಳಿವಳಿಕೆಯ ನೋಟಿಸ್ ಜಾರಿ ಮಾಡಿದೆ.
ಪುನೀತ್ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ದೊಂಬಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪುನೀತ್ ವಿರುದ್ಧ ರೌಡಿಪಟ್ಟಿ ತೆರೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಪುನೀತ್‌ಗೆ ನೋಟಿಸ್ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ತಮ್ಮ ವಿರುದ್ಧ ರೌಡಿಪಟ್ಟಿ ತೆರೆಯಲು ಅನುಮತಿ ಕೋರಿ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್ ವರದಿ ಸಲ್ಲಿಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿಆರೋಪಿಯಾಗಿರುವ ತಮ್ಮನ್ನು ಏಕೆ ರೌಡಿಪಟ್ಟಿಗೆ ಸೇರಿಸಬಾರದು ಎಂಬುದಕ್ಕೆ ವಿವರಣೆ ಸಲ್ಲಿಸಬಹುದು. ಇಲ್ಲದಿದ್ದರೆ, ವಿವರಣೆ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಎಸಿಪಿ ಅವರು ಪುನೀತ್‌ಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿಉಲ್ಲೇಖಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಕನಕಪುರದ ಸಾತನೂರು ಬಳಿ ಗೋ ಸಾಗಾಟ ವೇಳೆ ವ್ಯಕ್ತಿಯೋರ್ವ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನ ಆಗಿತ್ತು. ಈ ವಿಚಾರವಾಗಿ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರು ಏಪ್ರಿಲ್ 05 ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಜಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.
ಘಟನೆ...
ಮಾರ್ಚ್ 31 ರಂದು ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಮರು ದಿನ ಕ್ಯಾಂಟರ್ನಲ್ಲಿದ್ದ ಇದ್ರೀಷ್ ಪಾಷ(35) ಶವವಾಗಿ ಪತ್ತೆಯಾಗಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಸಾತನೂರು ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರರ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು.
ಇನ್ನು ದೂರು ದಾಖಲಾಗುತ್ತಿದ್ದಂತೆಯೇ ಕಳೆದ ಐದು ದಿನದಿಂದ ಪುನೀತ್ ಅಂಡ್ ಟೀಂ ತಲೆ ಮರೆಸಿಕೊಂಡಿತ್ತು. ಇನ್ನು ಆರೋಪಿಗಳನ್ನು ಬಂಧಿಸಲು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನಾಲ್ಕು ತಂಡಗಳನ್ನು ರಚಿಸಿದ್ದರು. ಸದ್ಯ ಆ ಪ್ರಕರಣದ ವಿಚಾರ ನಡೆಯುತ್ತಿದೆ.