ರಾಜ್ಯ ಸರ್ಕಾರದಿಂದ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾಗೆ ತೆರಿಗೆ ವಿನಾಯಿತಿ

ರಾಜ್ಯ ಸರ್ಕಾರದಿಂದ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾಗೆ ತೆರಿಗೆ ವಿನಾಯಿತಿ

 

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಒಂದೆರಡು ದಿನಗಳ ಹಿಂದೆ ಈ ಸಿನಿಮಾ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ, ತೆರಿಗೆ ವಿನಾಯಿತಿ ಮಾಡಿ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ ಎಂದು ಮನವಿ ಮಾಡಿತ್ತು. 

ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಬಂದ ಟ್ವೀಟ್‌ನಲ್ಲಿ ಈ ರೀತಿ ಇದೆ...

ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ "ಡೇರ್ ಡೆವಿಲ್ ಮುಸ್ತಫಾ" ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ.

ಚಿತ್ರತಂಡ ಮಾಡಿರುವ ಮನವಿ....

"ಒಂದಿಡೀ ತಲೆಮಾರನ್ನು ತಮ್ಮ ಮಾತು, ಕೃತಿ, ಜೀವನದಿಂದ ಅಪಾರವಾಗಿ ಪ್ರಭಾವಿಸಿರುವ ಕನ್ನಡದ ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಪೂರ್ಣಚಂದ್ರ ತೇಜಸ್ವಿಯವ ಸಾಹಿತ್ಯ ಕೃತಿ 'ಡೇರ್ ಡೆವಿಲ್ ಮುಸ್ತಫಾ' ಎಂಬ ಸಣ್ಣ ಕಥೆಯನ್ನು ಆಧರಿಸಿ ಸಿನಿಮಾಮರ ತಂಡವು ಶಶಾಂಕ್ ಸೋಗಾಲ ನಿರ್ದೇಶದಲ್ಲಿ 'ಡೇರ್ ಡೆವಿಲ್ ಮುಸ್ತಪಾ' ಎಂಬ ಸಿನಿಮಾ ನಿರ್ಮಾಣ ಮಾಡಿದೆ. ಕೋಮುಸಾಮರಸ್ಯ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೊಂಡು ಅಪಾರ ಜನರ ಮನ್ನಣೆ ಗಳಿಸುತ್ತಿದೆ. ತೇಜಸ್ವಿ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ ಈ ಸಿನಿಮಾವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚು ಹೆಚ್ಚು ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತಾವು ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕೆಂದು ವಿನಂತಿಸಿಕೊಳ್ಳುತ್ತೇಬೆ ಹಾಗೂ ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡುತ್ತೇವೆ" ಎಂದು ಚಿತ್ರತಂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು.

ತಾರಾಗಣ....

ಆದಿತ್ಯ ಅಶ್ರೀ, ಅಭಯ್‌, ಶಿಶಿರ್‌ ಬೈಕಾಡಿ, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಸುಂದರ್‌ ವೀಣಾ, ನಾಗಭೂಷಣ್‌, ಮೈಸೂರ್‌ ಆನಂದ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಡಾಲಿ' ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಈ ಸಿನಿಮಾವನ್ನು ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.

Ads on article

Advertise in articles 1

advertising articles 2

Advertise under the article