ಗೃಹಜ್ಯೋತಿ ಯೋಜನೆಯ ಲಾಭ ಹೊಸದಾಗಿ ಮನೆ ಕಟ್ಟಿರುವವರಿಗೂ, ಹೊಸ ಬಾಡಿಗೆದಾರರಿಗೂ ಸಿಗಲಿದೆ: ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು: ಗೃಹಜ್ಯೋತಿ ಯೋಜನೆಯ ಲಾಭ ಹೊಸದಾಗಿ ಮನೆ ಕಟ್ಟಿರುವವರಿಗೂ ಹಾಗೂ ಹೊಸ ಬಾಡಿಗೆದಾರರಿಗೂ ಸಿಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆ ಅಡಿ ಹೊಸ ಮನೆಗಳಿಗೆ 53 ಯೂನಿಟ್ ಉಚಿತ. ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಗೃಹಜ್ಯೋತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾವೇ ಭರಿಸಲಿದೆ ಎಂದು ವಿಧಾನಸೌಧದಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಗೃಹಜ್ಯೋತಿ ಯೋಜನೆ ಹೊಸದಾಗಿ ಮನೆ ಕಟ್ಟಿರುವವರಿಗೆ ಹಾಗೂ ಹೊಸದಾಗಿ ಮನೆ ಬಾಡಿಗೆಗೆ ಬಂದಿರುವವರಿಗೂ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಹೊಸದಾಗಿ ಮನೆ ಕಟ್ಟಿರುವವರಿಗೆ ಹಾಗೂ ಹೊಸ ಬಾಡಿಗೆದಾರರಿಗೆ ಗೃಹಜ್ಯೋತಿ ಯೋಜನೆಯಡಿ ಸರಾಸರಿ ವಿದ್ಯುತ್ ಬಳಕೆಯನ್ನು ನಿಗದಿಪಡಿಸುವುದು ಹೇಗೆ ಎಂಬ ಗೊಂದಲಗಳು ಆಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಈ ಹಿಂದೆ ಹೇಳಿದ್ದೆ. ಅದರಂತೆ ಈಗ ಎಲ್ಲರೊಡನೆ ಚರ್ಚಿಸಿ ಹೊಸದಾಗಿ ಮನೆ ಕಟ್ಟಿರುವವರಿಗೆ ಹಾಗೂ ಹೊಸದಾಗಿ ಮನೆಗೆ ಬಾಡಿಗೆಗೆ ಬಂದಿರವವರಿಗೂ ಗೃಹಜ್ಯೋತಿಯ ಯೋಜನೆಯ ಲಾಭ ಸಿಗುವಂತೆ ತೀರ್ಮಾನ ಮಾಡಿದ್ದೇವೆ ಎಂದರು.
ಹೊಸದಾಗಿ ಮನೆ ಕಟ್ಟಿರುವವರಿಗೆ ಹಾಗೂ ಬಾಡಿಗೆದಾರರಿಗೆ ಸರಾಸರಿ 53 ಯೂನಿಟ್ ಜತೆಗೆ ಹೆಚ್ಚುವರಿಯಾಗಿ ಶೇ. 10 ರಷ್ಟು ಯೂನಿಟ್ ಬಳಕೆಯ ಮಿತಿಯನ್ನು ವಿಧಿಸಲು ನಿರ್ಧರಿಸಲಾಗಿದೆ. ಅಂದರೆ, ಒಟ್ಟು 58 ರಿಂದ 59 ಯೂನಿಟ್‌ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು. ಈ ಸರಾಸರಿ ಬಳಕೆಯಲ್ಲಿ ವಿದ್ಯುತ್ ಬಳಸಿದರೆ ಶೂನ್ಯ ಬಿಲ್ ನೀಡುತ್ತೇವೆ. ಒಂದು ವೇಳೆ ಇದಕ್ಕಿಂತ ಹೆಚ್ಚಾಗಿ ಹೊಸ ಮನೆ ಕಟ್ಟಿರುವವರು ಹಾಗೂ ಹೊಸ ಬಾಡಿಗೆದಾರರು ವಿದ್ಯುತ್ ಬಳಸಿದರೆ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್‌ಗೆ ಬಿಲ್ ಪಾವತಿಸಬೇಕಾಗುತ್ತದೆ. ಹೊಸದಾಗಿ ಮನೆ ಕಟ್ಟಿರುವವರು ಹಾಗೂ ಬಾಡಿಗೆದಾರರು 12 ತಿಂಗಳ ನಂತರ ಸರಾಸರಿಯನ್ನು ತೆಗೆದುಕೊಂಡು ಹೊಸ ಸರಾಸರಿಯನ್ನು ನಿಗದಿ ಮಾಡಲಾಗುವುದು. ಅಲ್ಲಿಯವರೆಗೂ ಸರಾಸರಿ 53 ಜತೆಗೆ ಶೇ. 10 ಯೂನಿಟ್ ಹೆಚ್ಚುವರಿ ಬಳಕೆಯ ಮಿತಿ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿದ ಸಚಿವರು, 'ವಿದ್ಯುತ್ ದರ ಏರಿಕೆ ತೀರ್ಮಾನ ಕಾಂಗ್ರೆಸ್ ಸರ್ಕಾರದ್ದಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ್ದು. ಹಾಗಾಗಿ ಈಗ ಕೆಇಆರ್‌ಸಿ ದರ ಏರಿಕೆ ಮಾಡಿರುವುದನ್ನು ನಾವು ಜಾರಿ ಮಾಡಲೇಬೇಕಾಗುತ್ತದೆ. ದರ ಏರಿಕೆ ಹೊರೆಯಾಗಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ದರ ಏರಿಕೆ ಏಪ್ರಿಲ್‌ನಿಂದ ಜಾರಿಯಾಗಿರುವುದರಿಂದ ಮೇ ತಿಂಗಳ ಬಿಲ್‌ನಲ್ಲಿ ಹೆಚ್ಚು ಬಂದಿದೆ. ಜುಲೈನಿಂದ ಗೃಹಜ್ಯೋತಿ ಜಾರಿಯಾಗುವುದರಿಂದ ಯಾರಿಗೂ ಹೆಚ್ಚು ಹೊರೆಯಾಗುವುದಿಲ್ಲ ಎಂದರು.
ವಿದ್ಯುತ್ ದರವನ್ನು ಕೆಇಆರ್‌ಸಿ 70 ಪೈಸೆಯಷ್ಟು ಏರಿಸಿದೆ. ಜತೆಗೆ ಸ್ಲ್ಯಾಬ್‌ಗಳಲ್ಲೂ ಬದಲಾವಣೆ ಮಾಡಿ 100 ಯೂನಿಟ್ ಬಳಕೆ ನಂತರ ಪ್ರತೀ ಯೂನಿಟ್ ಗೆ 7 ರೂ. ದರ ವಿಧಿಸುತ್ತಿದೆ. ಮೊದಲೆಲ್ಲಾ 200 ಯೂನಿಟ್ ದಾಟಿದ ಮೇಲೆ 8.20 ರೂ. ದರ ವಿಧಿಸಲಾಗುತ್ತಿತ್ತು. ಕೆಇಆರ್‌ಸಿಯ ದರ ಏರಿಕೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ದರ ಏರಿಕೆಯಲ್ಲಿ ತಪ್ಪಾಗಿದೆ ಎಂದು ಕಂಡು ಬಂದರೆ ಕೆಇಆರ್‌ಸಿ ಮುಂದೆ ಪುನರ್ ಪರಿಶೀಲನೆ ಬಗ್ಗೆ ಆರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯದ ಯಾವುದೇ ಭಾಗದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆಯಾಗುವ ವಿಶ್ವಾಸವಿದೆ. ಹಾಗಾಗಿ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂಬ ಆಶಾಭಾವನೆ ತಮ್ಮದು ಎಂದು ಅವರು ಹೇಳಿದರು. ಇದೇ ವೇಳೆ ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ ಎಂದ ಅವರು, ಕೆಲವರು ನನ್ನ ಹೆಸರಾಗಲಿ, ಅಧಿಕಾರಿಗಳ ಹೆಸರೇಳಿ ವರ್ಗಾವಣೆಗೆ ಹಣ ಕೇಳಿದರೆ ಆ ಬಗ್ಗೆ ತಮ್ಮ ಗಮನಕ್ಕೆ ತನ್ನಿ.. ಹೊರಗಡೆ ಏನಾಗುತ್ತದೆ ಎಂಬುದು ನನಗೆ ಗೊತ್ತಾಗಲ್ಲ. ಹಾಗಾಗಿ ಯಾರೇ ವರ್ಗಾವಣೆಗೆ ಹಣ ಕೇಳಿದರೂ ಅದನ್ನು ತಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುವುದಾಗಿ ಸಚಿವ ಜಾರ್ಜ್ ಹೇಳಿದರು.