ಕೋಮು ದ್ವೇಷದಿಂದ ಕೊಲೆಗೀಡಾದ ಫಾಝಿಲ್, ಮಸೂದ್, ಜಲೀಲ್, ದೀಪಕ್ ರಾವ್ ಕುಟುಂಬಗಳಿಗೆ ಸರಕಾರದಿಂದ ತಲಾ 25 ಲಕ್ಷ ರೂ. ಪರಿಹಾರ!
Friday, June 16, 2023
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದಿಂದ ಕೊಲೆಗೀಡಾದ ಫಾಝಿಲ್, ಮಸೂದ್, ಜಲೀಲ್, ದೀಪಕ್ ರಾವ್ ಸೇರಿದಂತೆ ಒಟ್ಟು 4 ಮಂದಿಯ ಕುಟುಂಬಗಳಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿ ರಾಜ್ಯ ಕಾಂಗ್ರೆಸ್ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
2022ರ ಜುಲೈ 19ರಂದು ಬೆಳ್ಳಾರೆಯ ಮಸೂದ್, 28ರಂದು ಮಂಗಳಪೇಟೆಯ ಮುಹಮ್ಮದ್ ಫಾಝಿಲ್, ಡಿಸೆಂಬರ್ 24ರಂದು ಕಾಟಿಪಳ್ಳದ ಅಬ್ದುಲ್ ಜಲೀಲ್ ಹಾಗೂ 2018ರ ಜನವರಿ 3ರಂದು ಕಾಟಿಪಳ್ಳ 3ನೇ ಬ್ಲಾಕಿನ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳ ಬಂಧನ ಕೂಡ ಆಗಿತ್ತು.
ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಸರಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿದ ಮೇರೆಗೆ ಈ ಪರಿಹಾರ ಘೋಷಿಸಲಾಗಿದ್ದು, ಜೂ.19ರಂದು ಪರಿಹಾರದ ಧನದ ಚೆಕ್ ಪಡೆಯುವಂತೆ ಸೂಚಿಸಲಾಗಿದೆ.