ಸೋಮೇಶ್ವರ ಬೀಚ್‌ನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣ; ಒಟ್ಟು 5 ಮಂದಿಯ ಬಂಧನ
ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಐವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಸೇರಿದಂತೆ ಒಟ್ಟು ಐದು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ. ಉಳ್ಳಾಲದ ಬಸ್ತಿಪಡ್ಪು ನಿವಾಸಿ ಯತೀಶ್(48), ಉಚ್ಚಿಲ ನಿವಾಸಿ ಸಚಿನ್(23), ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್(19) ಬಂಧಿತ ಆರೋಪಿಗಳಾಗಿದ್ದು, ಇವರು ಸಂಘಪರಿವಾರದ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಗಲಭೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಬೇಕಿದ್ದು, ಇದಕ್ಕಾಗಿ ಮೂರು ತಂಡಗಳು ಕಾರ್ಯಚರಣೆ ನಡೆಸಿವೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.
ಹಲ್ಲೆ ಮಾಡಿರುವ ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಉಳ್ಳಾಲ ಪೊಲೀಸ್ ಠಾಣೆಗೆ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಭಜರಂಗದಳ ಪ್ರಮುಖರು ಭೇಟಿ ನೀಡಿದ್ದು, ಹಲವು ಅಮಾಯಕ ಹಿಂದೂ ಯುವಕರನ್ನು ಬಂಧಿಸಲಾಗಿದೆ. ತಕ್ಷಣ ಅಮಾಯಕರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಕೇಸ್ ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡುವುದಾಗಿ ಕಮಿಷನರ್ ಕುಲದೀಪ್ ಜೈನ್ ಭರವಸೆ ನೀಡಿದರು.
ಇನ್ನು ಪ್ರಕರಣ ಗಂಭೀರತೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲೇ ಕಮಿಷನರ್ ಕುಲದೀಪ್ ಜೈನ್ ಮೊಕ್ಕಾಂ ಹೂಡಿದ್ದಾರೆ.
ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ಅನೈತಿಕ ಪೊಲೀಸ್ ಗಿರಿ ನಡೆದಿತ್ತು, ಕೇರಳ ಮೂಲದ 6 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದರು. ಇದೇ ವೇಳೆ ತಂಡವೊಂದು ಹಲ್ಲೆ ನಡೆಸಿತ್ತು.
ಜಾಫರ್ ಶರೀಫ್, ಮುಜೀಬ್ ಮತ್ತು ಆಶೀಕ್ ಮೇಲೆ ಹಲ್ಲೆ ಮಾಡಲಾಗಿತ್ತು. ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಸಂಘಟನೆಗೆ ಸೇರಿದ ಕಾರ್ಯಕರ್ತರು ದಾಳಿ ಮಾಡಿದ್ದರು.