ಒಡಿಶಾ ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಶೇರ್ ಮಾಡಿದ ತುಮಕೂರಿನ ಬಿಜೆಪಿ ನಾಯಕಿ; ಮಾಹಿತಿ ಸಂಗ್ರಹಿಸಿದ ಒಡಿಶಾ ಪೊಲೀಸರು; ಟ್ವಿಟ್ಟರ್​ ಮೂಲಕ ಎಚ್ಚರಿಕೆ ನೀಡಿದ ಒಡಿಶಾ ಪೊಲೀಸರು

ಒಡಿಶಾ ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಶೇರ್ ಮಾಡಿದ ತುಮಕೂರಿನ ಬಿಜೆಪಿ ನಾಯಕಿ; ಮಾಹಿತಿ ಸಂಗ್ರಹಿಸಿದ ಒಡಿಶಾ ಪೊಲೀಸರು; ಟ್ವಿಟ್ಟರ್​ ಮೂಲಕ ಎಚ್ಚರಿಕೆ ನೀಡಿದ ಒಡಿಶಾ ಪೊಲೀಸರು

ಬೆಂಗಳೂರು: ಒಡಿಶಾದ ಬಾಲಾಸೋರ್​ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ 288 ಜನರು ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘನ ಘೋರ ದುರಂತಕ್ಕೆ ವಿಶ್ವವೇ ಕಂಬನಿ ಮಿಡಿದಿದೆ. ಜೊತೆಗೆ ವಿಶ್ವದ ದೊಡ್ಡ ದೊಡ್ಡ ನಾಯಕರು ಮಮ್ಮಲ ಮರುಗಿದ್ದಾರೆ. ಭೀಕರ ಸರಣಿ ರೈಲು ಅಪಘಾತ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಆದರೂ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಇದು ದುಷ್ಕರ್ಮಿಗಳ ಕೈವಾಡ ಎಂದೂ ಜನರಲ್ಲಿ ಗೊಂದಲ ಮೂಡಿಸುವ ಜೊತೆಗೆ ಒಂದು ಸಮುದಾಯವನ್ನು ಗುರಿ ಮಾಡುತ್ತಿದ್ದಾರೆ.

ಈ ಮಧ್ಯೆ ಈ ರೈಲು ದುರಂತಕ್ಕೆ ಮಸೀದಿ ಕಾರಣ ಎಂದು ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಎಸ್​ ಎನ್ನುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಪೋಸ್ಟ್ ಹಾಕಿರುವ ತುಮಕೂರಿನ ಮಹಿಳೆ ಯಾರೆಂದು ಒಡಿಶಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಒಡಿಶಾ ಬಾಲಸೋರ್ ರೈಲು ದುರಂತಕ್ಕೆ ಜಿಹಾದಿಗಳು ಕಾರಣ ಎಂದು ಘಟನೆ ನಡೆದ ಸಮೀಪವಿರುವ ಮಸೀದಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಇನ್ನು ತುಮಕೂರು ಮೂಲದ ಮಹಿಳೆಯೊಬ್ಬರು ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದ್ದು, ಇದು ಒಡಿಶಾ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಒಡಿಶಾ ಪೊಲೀಸರು, ಮಸೀದಿ ಫೋಟೋ ಹರಿಬಿಟ್ಟ ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪೊಲೀಸರಿಂದ ಮಹಿಳೆಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಸುಳ್ಳು ಸುದ್ದಿ ಬಗ್ಗೆ ಒಡಿಶಾ ಪೊಲೀಸರು ಟ್ವಿಟ್ಟರ್​ ಮೂಲಕ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

ರೈಲು ದುರಂತದ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಯಾರು ಕೊಡ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು . ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಪೋಸ್ಟ್ ಮಾಡಿರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ರೈಲು ದುರಂತಕ್ಕೆ ಆ ಸಮುದಾಯ ಕಾರಣವೆಂದು ಘಟನೆ ಸಮೀಪದಲ್ಲಿರುವ ಮಸೀದಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಗಳು ನಡೆಯುತ್ತಿದ್ದು, ಇದರ ಮೇಲೆ ಒಡಿಶಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article