ವಿಪಕ್ಷ ನಾಯಕನ ಸ್ಥಾನಕ್ಕಾಗಿ ಮುಂದುವರಿದ ಸರ್ಕಸ್; ಯಡಿಯೂರಪ್ಪ ನಿವಾಸಕ್ಕೆ ಆಕಾಂಕ್ಷಿಗಳ ಭೇಟಿ
ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆ ರವಿವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಲಿರುವ ಬಿಎಸ್ ಯಡಿಯೂರಪ್ಪ, ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಹಿನ್ನೆಲೆ ಆಕಾಂಕ್ಷಿಗಳಿಂದ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಬೆಳಗ್ಗೆ ಮಾಜಿ ಸಿಎಂ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿಪಕ್ಷ ನಾಯಕನಾಗುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರಗ ಜ್ಞಾನೇಂದ್ರ, ನಾನು ಯಾವ ಸ್ಥಾನದ ಆಕಾಂಕ್ಷಿ ಅಲ್ಲ. ಸಮರ್ಥ ಅಂತ ಕೊಟ್ರೆ ನಿಭಾಯಿಸ್ತೀನಿ ಎಂದು ಹೇಳಿದೆ. ಇದೇ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದಕ್ಕೆ ಬೇರೆ ಅರ್ಥ ಇಲ್ಲ. ಬೆಂಗಳೂರಿಗೆ ಬಂದಾಗೆಲ್ಲ ಯಡಿಯೂರಪ್ಪ ಮನೆಗೆ ಬಂದು ಹೋಗೋದು ನನ್ನ ಕ್ರಮ. ಯಾವಾಗಲೂ ನಾನು ಅವರನ್ನು ದರ್ಶನ ಮಾಡಿಯೇ ಹೋಗೋದು. ಹೀಗಾಗಿ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.
ವಿಪಕ್ಷ ನಾಯಕನ ರೇಸ್ನಲ್ಲಿ ನನ್ನ ಹೆಸರು ಇದೆ ಎಂಬುದರ ಕುರಿತ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.
ನಾನು ಪರಿಷತ್ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ. ಕಲ್ಯಾಣ ಕರ್ನಾಟಕಕ್ಕೆ ಒಂದು ಸ್ಥಾನವನ್ನ ನೀಡಬೇಕು ಎಂದು ಬಿಎಸ್‌ವೈ ಭೇಟಿ ಬಳಿಕ ಪರಿಷತ್ ಸದಸ್ಯ ಶಶಿಲ್ ನಮೋಶಿ ಹೇಳಿದ್ದಾರೆ.