ಜನರ ನಿದ್ದೆ ಕೆಡಿಸಿದ್ದ ನರಭಕ್ಷಕ ಹುಲಿಯನ್ನು ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು; ನಿಟ್ಟುಸಿರು ಬಿಟ್ಟ ಜನ
ಮೈಸೂರು: ಬಂಡೀಪುರ ಭಾಗದಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬಳು ಬಲಿಯಾದ ಬಳಿಕ ಜನರ ನಿದ್ದೆ ಕೆಡಿಸಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಹುಲಿಯನ್ನು ಹಿಡಿಯಲಾಗಿದೆ.
ಸೋಮವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಎರಡು ದಿನದ ಹಿಂದೆ ಹಸುವೊಂದನ್ನು ಕೊಂದಿದ್ದ ಜಾಗಕ್ಕೆ ಬಂದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. 10 ವರ್ಷದ ಗಂಡು ಹುಲಿ ಇದಾಗಿದ್ದು ಸದ್ಯ ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ.
ನ.24ರಂದು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗಿದ್ದ ರತ್ನಮ್ಮ (55) ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು. ಅಲ್ಲದೇ ದೇಹದ ಭಾಗವನ್ನೂ ತಿಂದು ಹಾಕಿತ್ತು. ಮರು ದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ನಂತರ ಜನರಲ್ಲಿ ಆತಂಕ ಹೆಚ್ಚಾಗಿ ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಮೂರು ದಿನಗಳ ಸತತ ಕಾರ್ಯಾಚರಣೆಯಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಇನ್ನು ಹುಲಿ ಒಮ್ಮೆ ಬೇಟೆಯಾಡಿದ ಸ್ಥಳಕ್ಕೆ ಮತ್ತೊಮ್ಮೆ ಬೇಟೆಗಾಗಿ ಬಂದೇ ಬರುತ್ತದೆ ಎಂಬ ಕಾರಣದಿಂದ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಸೋಮವಾರ ರಾತ್ರಿ 9ರ ಸಮಯದಲ್ಲಿಯೇ ಹುಲಿ ಹಸು ತಿನ್ನಲು ಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಮೀಪದಲ್ಲಿಯೇ ಬೋನು ಇರಿಸಿ ಅದರೊಳಗೆ ವೈದ್ಯಾಧಿಕಾರಿ ಡಾ.ವಾಸೀಂ ಜಾಫರ್ ಅವರು ಇರುವಂತೆ ನೋಡಿಕೊಂಡಿತ್ತು. ಅಲ್ಲದೇ ಸಿಬ್ಬಂದಿಯೂ ಅಲ್ಲಿಯೇ ಇದ್ದರು. ಮಧ್ಯರಾತ್ರಿ ಮತ್ತೆ ಹುಲಿ ಬಂದಾಗ ಅದಕ್ಕೆ ಅರವಳಿಕೆಯನ್ನು ಡಾ.ವಾಸೀಂ ಜಾಫರ್ ಅವರು ನೀಡುವಲ್ಲಿ ಯಶಸ್ವಿಯಾದರು. ಕೆಲವೇ ಕ್ಷಣದಲ್ಲಿ ಉರುಳಿ ಬಿದ್ದ ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದು ಬೆಳಗಿನ ಜಾವವೇ ಮೈಸೂರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಯಿತು.
ಮತ್ತೊಂದೆಡೆ ಹುಲಿ ಸೆರೆಗೆ ಸಾಕಾನೆ ಹಾಗೂ ಡ್ರೋನ್ ಬಳಸಿ ನಿರಂತರ ಶೋಧ ನಡೆಸಲಾಗಿತ್ತು. ಸಾಕಾನೆಗಳಾದ ಪಾರ್ಥ, ರೋಹಿತ್, ಹಿರಣ್ಯಾ ಆನೆಗಳ ಮೂಲಕ ಕಾರ್ಯಾಚರಣೆ ನಡೆಯುತ್ತಿತ್ತು. ಟ್ರ್ಯಾಪ್ ಕ್ಯಾಮೆರಾಗಳನ್ನು ಹಾಕಿ ಹುಲಿಗಾಗಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಎರಡು ಹುಲಿಗಳ ಓಡಾಟ ಪತ್ತೆಯಾಗಿತ್ತು. ಅಷ್ಟೇ ಅಲ್ಲ ಸಾಕುಪ್ರಾಣಿಗಳ ಮೇಲೆ ದಾಳಿ ನಡೆದಿದ್ದೂ ಪತ್ತೆಯಾಗಿತ್ತು. ಅಧಿಕಾರಿಗಳು ಸೇರಿ 207 ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. 100 ಗಿರಿಜನರು ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.