ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್'ರ ನಿವಾಸ ಸೇರಿದಂತೆ 30 ಕಡೆಗಳಲ್ಲಿ ಸಿಬಿಐ ದಾಳಿ
ನವದೆಹಲಿ: ಜಮ್ಮು – ಕಾಶ್ಮೀರದ ಪ್ರದೇಶದಲ್ಲಿ ಹೈಡಲ್ ಯೋಜನೆಗೆ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಜಮ್ಮು ಮತ್ತು ಕಾಶ್ಮೀರ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರ ನಿವಾಸ ಹಾಗೂ ದೇಶದಾದ್ಯಂತ 30 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಇಂದು ಬೆಳಗ್ಗೆ ದೆಹಲಿ, ಮುಂಬೈ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಹಲವು ನಗರಗಳ 30 ಸ್ಥಳಗಳಲ್ಲಿ ಸುಮಾರು 100 ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರ್ ಕೆ ಪುರಂ, ದ್ವಾರಕಾ ಮತ್ತು ದೆಹಲಿಯ ಏಷ್ಯನ್ ಗೇಮ್ಸ್ ವಿಲೇಜ್‌ನಲ್ಲಿರುವ ಮಲಿಕ್ ಅವರಿಗೆ ಸಂಬಂಧಿಸಿದ ಮನೆಗಳು ಮತ್ತು ಗುರುಗ್ರಾಮ್ ಹಾಗೂ ಬಾಗ್‌ಪತ್‌ನಲ್ಲಿರುವ ಆವರಣಗಳನ್ನು ಶೋಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಬಿಐ ತನಿಖೆ ನಡೆಸುತ್ತಿರುವ ಈ ಪ್ರಕರಣವು 2,200 ಕೋಟಿ ರೂಪಾಯಿ ಮೌಲ್ಯದ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಅನ್ನು ಸಿವಿಲ್ ಗುತ್ತಿಗೆ ನೀಡುವಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಿಕ್ ಅವರ ನಿವಾಸ, ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್‌ನ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೂ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರ ವರೆಗೆ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದ ಮಲಿಕ್ ಅವರು, ಕಿರು ಯೋಜನೆಗೆ ಸಂಬಂಧಿಸಿದ ಒಂದು ಫೈಲ್ ಸೇರಿದಂತೆ ಎರಡು ಫೈಲ್‌ಗಳಿಗೆ ಸಹಿ ಹಾಕಲು ತಮಗೆ 300 ಕೋಟಿ ರೂಪಾಯಿ ಲಂಚದ ಆಮಿಷ ನೀಡಲಾಗಿತ್ತು ಎಂದು ಹೇಳಿದ್ದರು.
''ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ 3-4 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಹೀಗಿದ್ದರೂ ಸರ್ಕಾರಿ ಏಜೆನ್ಸಿಗಳ ಮೂಲಕ ನನ್ನ ಮನೆ ಮೇಲೆ ಸರ್ವಾಧಿಕಾರಿ ದಾಳಿ ನಡೆಸುತ್ತಿದ್ದಾರೆ. ನನ್ನ ಚಾಲಕ ಮತ್ತು ಸಹಾಯಕನ ಮೇಲೆಯೂ ಹಲ್ಲೆ ನಡೆಸಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ನಾನು ರೈತನ ಮಗ, ಈ ದಾಳಿಗಳಿಗೆ ಹೆದರುವುದಿಲ್ಲ. ನಾನು ರೈತರೊಂದಿಗೆ ಇದ್ದೇನೆ ಎಂದು ಮಲಿಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.