ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮೊಬೈಲ್ ಮಾಲೀಕನ ಮೇಲೆ ಹಲ್ಲೆ; ಸುಳ್ಳು ಸುದ್ದಿಯ ವಿರುದ್ಧ ಪೊಲೀಸರು ಸ್ಪಷ್ಟನೆ; ಆರೋಪಿಗಳಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಇದ್ದಾರೆ ಎಂದು ದಾಖಲೆಯೊಂದಿಗೆ ಉಲ್ಲೇಖ ಮಾಡಿದ ಸಚಿವ ಗುಂಡೂರಾವ್
ಬೆಂಗಳೂರು: ಅಜಾನ್ ಪ್ರಾರ್ಥನೆಗೆ ಹನುಮಾನ್ ಚಾಲೀಸಾ ಹಾಕಿದ್ದರಿಂದ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿದ್ದು, ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ನಜರತ್ ಪೇಟೆಯಲ್ಲಿ ಹನುಮಾನ್ ಜಾಲೀಸಾ ಹಾಕಿದ್ದಕ್ಕೆ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ಈ ಕುರಿತು ಕೆಲವು ಮಾಧ್ಯಮಗಳು ಕೂಡ ಸುಳ್ಳು ಸುದ್ದಿ ಪ್ರಕಟಿಸಿ ಗೊಂದಲವನ್ನುಂಟು ಮಾಡಿದ್ದವು.
ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ನಜರತ್ ಪೇಟೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿತ್ತು. ನಜರತ್ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಮುಖೇಶ್ ಎಂಬುವವರು ಮೊಬೈಲ್ ಸರ್ವೀಸ್ ಅಂಗಡಿ ಹೊಂದಿದ್ದು, ರವಿವಾರ ಸಂಜೆ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಸುಳ್ಳು ಸುದ್ದಿ ಹರಡಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳಲ್ಲಿ ಒಬ್ಬನು ಮೊದಲು ಮುಖೇಶ್ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬಳಿಕ ಕೋಪಕೊಂಡ ಮುಖೇಶ್ ಕೂಡ ಅಂಗಡಿಯಿಂದ ಹೊರಹೋಗಿ ಕೈಕೈ ಮಿಲಾಯಿಸಿರುವುದು ಕಂಡು ಬಂದಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಸೋಮವಾರ ಹಲ್ಲೆಗೊಳಗಾದ ವ್ಯಕ್ತಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಘಟನೆ ಸಂಬಂಧ ರವಿವಾರ ರಾತ್ರಿ 10.30ಕ್ಕೆ ಕಬ್ಬನ್‌ಪೇಟೆ ನಿವಾಸಿ ಜಿ ಮುಖೇಶ್ ಅವರು, ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ದೂರು ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಶಹನವಾಜ್, ಸುಲೇಮಾನ್ ಮತ್ತು ರೋಹಿತ್ ಬಂಧಿತರು ಎನ್ನಲಾಗಿದೆ. ದ್ಯಾನೀಶ್ ಮತ್ತು ತರುಣ್ ಎಂಬುವವರು ಪರಾರಿಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಈ ನಡುವೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಪೊಲೀಸರು ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸರು ಆರೋಪಿಗಳ ವಿರುದ್ಧ ಕ್ರಿಮಿನಲ್ ಬೆದರಿಕೆ (ಐಪಿಸಿ 506), ಶಾಂತಿ ಭಂಗದ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಐಪಿಸಿ 504), ಕಾನೂನುಬಾಹಿರ ಸಭೆ (ಐಪಿಸಿ 149) ಮತ್ತು ಕೊಲೆ ಯತ್ನ (ಐಪಿಸಿ 307) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ನಡೆದದ್ದಲ್ಲ: ದಿನೇಶ್ ಗುಂಡೂರಾವ್
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ಪ್ರಚೋದನೆಗೆ ಒಳಗಾಗದೆ ವಿವೇಚನೆಯಿಂದ ಯೋಚಿಸಿ. ಲಭ್ಯವಾದ ಎಫ್‌ಐಆರ್ ಪ್ರತಿ ಮತ್ತು ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಎಲ್ಲೂ ಉಲ್ಲೇಖಿಸಿಲ್ಲ ಎಂದು ದಾಖಲೆಯೊಂದಿಗೆ ತಿಳಿಸಿದ್ದಾರೆ.
ಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರ ಇರುವುದಲ್ಲ. ಆರು ಆರೋಪಿಗಳಲ್ಲಿ ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಆರೋಪಿಗಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಸ್ಪಷ್ಟೀಕರಣವನ್ನು ತನಿಖೆಯ ಬಳಿಕ ಪೊಲೀಸರು ತಿಳಿಸಬೇಕಾಗಿದೆ ಎಂದು ಹೇಳಿದ್ದಾರೆ.