ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿಯೊಳಗೆ ಭುಗಿಲೆದ್ದ ಬಂಡಾಯದ ಬಿಸಿ; ಯಡಿಯೂರಪ್ಪ ವಿರುದ್ಧವೇ ಆಕ್ರೋಶ; ಬಿಜೆಪಿಗೆ ಮುಳುವಾಗುವ ಸಾಧ್ಯತೆ; ಯಾರೆಲ್ಲ ಮುನಿಸಿಕೊಂಡಿದ್ದಾರೆ ನೋಡಿ...

ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿಯೊಳಗೆ ಭುಗಿಲೆದ್ದ ಬಂಡಾಯದ ಬಿಸಿ; ಯಡಿಯೂರಪ್ಪ ವಿರುದ್ಧವೇ ಆಕ್ರೋಶ; ಬಿಜೆಪಿಗೆ ಮುಳುವಾಗುವ ಸಾಧ್ಯತೆ; ಯಾರೆಲ್ಲ ಮುನಿಸಿಕೊಂಡಿದ್ದಾರೆ ನೋಡಿ...

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ ಬೆನ್ನಲ್ಲೇ ಬಂಡಾಯದ ಬಿಸಿ ತಾರಕಕ್ಕೇರಿದ್ದು, ಬಹುತೇಕರು ಯಡಿಯೂರಪ್ಪ ಹಾಗು ಅವರ ಕುಟುಂಬದವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದು, ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. 

ಕಳೆದ ಒಂದು ತಿಂಗಳಿನಿಂದ ಬಿಜೆಪಿ ಟಿಕೆಟಿಗಾಗಿ ನಡೆಯುತ್ತಿದ್ದ ಲಾಬಿ, ಆಕಾಂಕ್ಷಿಗಳ ಆರೋಪ/ಪ್ರತ್ಯಾರೋಪ ಅಷ್ಟಿಷ್ಟಲ್ಲ. ಚುನಾವಣೆ ಎಂದ ಮೇಲೆ ಅಲ್ಲಲ್ಲಿ ಅಸಮಾಧಾನ ಸಹಜ ಎಂದಿರುವ ಬಿಜೆಪಿಯು ಎಲ್ಲಾ 25 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಕೋಲಾರ, ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ.

ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ನಂತರ ಆಕಾಂಕ್ಷಿಗಳ ಆಕ್ರೋಶ ಹೆಚ್ಚಾಗಿದೆ. ನಮಗೆ ಟಿಕೆಟ್ ಕೈತಪ್ಪಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಎಂದು ಕೆಲವರು ನೇರವಾಗಿ ಆರೋಪಿಸಿದ್ದಾರೆ, ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿ ನನ್ನ ಮತ್ತು ವಿಜಯೇಂದ್ರನ ಪಾತ್ರ ಏನೂ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಆದಾಗ್ಯೂ, ನಮಗೆ ಯಡಿಯೂರಪ್ಪನವರು ಟಿಕೆಟ್ ಸಿಗದಂತೇ ಮಾಡಿದರು ಎಂದು ಕೆಲವು ಆಕಾಂಕ್ಷಿಗಳು ಯಡಿಯೂರಪ್ಪನವರ ವಿರುದ್ದ ಪ್ರತ್ಯಕ್ಷ/ಪರೋಕ್ಷ ಆರೋಪವನ್ನು ಮಾಡಿದ್ದಾರೆ. 

ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್

ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಕ್ಷೇತ್ರದ ಟಿಕೆಟ್ ಅನ್ನು ಬಯಸಿದ್ದರು. ಸಂಭಾವ್ಯರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು, ರಾಜ್ಯ ಬಿಜೆಪಿ ಶಿಫಾರಸು ಪಟ್ಟಿಯಲ್ಲಿ ಅವರ ಹೆಸರು ಇದ್ದರೂ, ಬಿಜೆಪಿ ವರಿಷ್ಠರು ಕೊನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ನೀಡಿತು. ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಮತ್ತು ಅವರ ಪುತ್ರ ಎಂದು ನೇರವಾಗಿ ಆರೋಪಿಸಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲೊಬ್ಬರಾಗಿದ್ದವರು ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್‍. ಆದರೆ, ಬಿಜೆಪಿಯು ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ನನ್ನ ಮಗನಿಗೆ ಟಿಕೆಟ್ ಕೈತಪ್ಪಿದ್ದು ಯಡಿಯೂರಪ್ಪನವರಿಂದ ಎಂದು ಚಂದ್ರಪ್ಪ ಆರೋಪಿಸಿದ್ದಾರೆ. ನಾನು ಯಡಿಯೂರಪ್ಪ ಕುಟುಂಬಕ್ಕೆ ತೋರಿದ ನಿಷ್ಠೆ ಸಾರ್ಥಕವಾಯಿತು ಎಂದು ಚಂದ್ರಪ್ಪ ವ್ಯಂಗ್ಯವಾಡಿದ್ದಾರೆ.

ಹಾಲೀ ಸಂಸದ ಕರಡಿ ಸಂಗಣ್ಣ

ಕೊಪ್ಪಳದ ಹಾಲೀ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ, ಅಲ್ಲಿಗೆ, ಡಾ. ಬಸವರಾಜ್‌ ಕ್ಯಾವಟೂರು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪರೋಕ್ಷವಾಗಿ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ ಎಂದು ಆರೋಪಿಸಿರುವವರಲ್ಲಿ ಸಂಗಣ್ಣ ಕೂಡಾ ಒಬ್ಬರು. ಟಿಕೆಟ್ ತಪ್ಪಿದ್ದಕ್ಕೆ ಇವರ ಬೆಂಬಲಿಗರು, ದಾಂಧಲೆಯನ್ನೂ ನಡೆಸಿದ್ದರು. ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದ ಇವರನ್ನು ಬಸವರಾಜ ಬೊಮ್ಮಾಯಿ ಸಮಾಧಾನ ಪಡಿಸಿದ್ದಾರೆ.

ಹಾಲೀ ಸಂಸದ ಡಿ.ವಿ.ಸದಾನಂದ ಗೌಡ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನೂ ಬಿಜೆಪಿ ಈ ಬಾರಿ ಕೈಬಿಟ್ಟಿತ್ತು. ಗೌಡ್ರಿಗೆ ಟಿಕೆಟ್ ಫೈನಲ್ ಎಂದೇ ಆಗಿತ್ತು, ಆದರೆ, ಅಲ್ಲಿಂದ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಿತು. ಕೊನೆಯ ಹಂತದಲ್ಲಿ ನಡೆದ ಈ ರಾಜಕೀಯ ವಿದ್ಯಮಾನದಿಂದ ವಿಚಲಿತರಾದ ಸದಾನಂದ ಗೌಡ್ರು, ಯಡಿಯೂರಪ್ಪನವರನ್ನು ಗುರಿಯಾಗಿಸಿದ್ದರು. ಲೋಕಸಭಾ ಚುನಾವಣೆಯ ನಂತರ ಪಕ್ಷ ಶುದ್ದೀಕರಣ ಆಗಬೇಕೆನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಮಾಜಿ ಸಚಿವ ಮಾಧುಸ್ವಾಮಿ

ತುಮಕೂರು ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಲೊಬ್ಬರಾಗಿದ್ದವರು ಮಾಜಿ ಸಚಿವ ಜೆ. ಮಾಧುಸ್ವಾಮಿಯವರು. ಆದರೆ, ವಿ.ಸೋಮಣ್ಣ ಕೂಡಾ ಟಿಕೆಟ್ ಬಯಸಿ, ಹಲವು ಸುತ್ತು ಹೈಕಮಾಂಡ್ ಅನ್ನು ಭೇಟಿಯಾಗಿದ್ದರು. ಅದರ ಫಲವಂತೆ ಸೋಮಣ್ಣಗೆ ಟಿಕೆಟ್ ನೀಡಲಾಗಿದೆ. ಮಾಧುಸ್ವಾಮಿ ಕೂಡಾ ಪರೋಕ್ಷವಾಗಿ ಯಡಿಯೂರಪ್ಪನವರನ್ನೆ ಗುರಿಯಾಗಿಸಿದ್ದರು. ಕೊನೆಗೆ, ಯಡಿಯೂರಪ್ಪನವರು ಅವರನ್ನು ಸಮಾಧಾನ ಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article