ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ; ಹಲವರಿಗೆ ಗಾಯ: ತನಿಖೆ ಪ್ರಗತಿಯಲ್ಲಿದೆ ಎಂದ ಸಿಎಂ
ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಹಲವಾರು ಗಾಯಗೊಂಡಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಕೆಫೆಯ ಮುಂಭಾಗ ಸ್ಫೋಟವಾಗಿದೆ. ಮಹಿಳೆ ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಟ್ಫೀಲ್ಡ್, ಹೆಚ್ಎಎಲ್, ಇಂದಿರಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೊಂದು ಸುಧಾರಿತ ಸ್ಪೋಟ ಪ್ರಕರಣವಾಗಿದೆ. ಇಂತಹ ಘಟನೆಗಳು ನಡೆಯಬಾರದು, ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ರಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಸದ್ಯ ಸಿಸಿಟಿವಿ ಪರಿಶೀಲನೆ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟಿರುವುದು ತಿಳಿದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಟೆರರಿಸ್ಟ್ ಮಾಡಿರುವ ಬಗ್ಗೆ ಇನ್ನು ಗೊತ್ತಿಲ್ಲ. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಸಣ್ಣ ಪ್ರಮಾಣದದ್ದರೂ ಅದು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.
ಎಲ್ಲರ ಕಾಲದಲ್ಲೂ ಕೂಡ ಘಟನೆಗಳು ನಡೆದಿವೆ. ಆದರೆ ಇಂತಹ ಘಟನೆ ನಡೆಯಬಾರದು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಲಾಗುವುದು. ಬ್ಲಾಸ್ಟ್ ಆಗಿರುವುದು ಸತ್ಯವಾಗಿದೆ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.
ಬ್ಲಾಸ್ಟ್ ಆಗಿದೆ ಎಂಬ ಮಾಹಿತಿ ಬಂದಿದೆ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಯಾರೂ, ಏನೂ ಅಂತ ಯಾರಿಗೂ ಗೊತ್ತಿಲ್ಲ. ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದ ಬಳಿಕ ಮಾತಾಡುವೆ ಎಂದಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?
ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ರಾಮೇಶ್ವರಂ ಕೆಫೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಏನು ಸ್ಫೋಟವಾಗಿದೆ ಅಂತಾ ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ಗಾಯಗೊಂಡ 9 ಜನರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ಅಥವಾ ನಾಳೆ ಸ್ಥಳಕ್ಕೆ ಭೇಟಿ ನೀಡಿ ನಾನೂ ಪರಿಶೀಲಿಸುತ್ತೇನೆ. ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ, ಪರಿಶೀಲನೆ ನಡೀತಿದೆ ಎಂದರು.
ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತೆ. ಬ್ಯಾಗ್ ಇತ್ತು ಅಂತಿದ್ದಾರೆ, ಆದರೆ ನಿರ್ದಿಷ್ಟ ಮಾಹಿತಿ ಇನ್ನೂ ಬರಬೇಕಿದೆ. ನಿರ್ದಿಷ್ಟ ಮಾಹಿತಿ ಪೊಲೀಸ್ ಇಲಾಖೆಯಿಂದ ಬರಬೇಕಿದೆ. ನಮ್ಮ ಇಲಾಖೆ ವರದಿ ಬರೋವರೆಗೂ ನಾನು ಏನೂ ಹೇಳಲು ಆಗಲ್ಲ ಎಂದಿದ್ದಾರೆ.