ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ; ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಕೆಗೆ ಬ್ರೇಕ್-10 ಲಕ್ಷ ರು. ದಂಡ; ದಿನೇಶ್ ಗುಂಡೂರಾವ್ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಲರ್ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳ ಪರೀಕ್ಷೆಗೆ ನೀಡಲಾಗಿತ್ತು. ಸದ್ಯ ಪರೀಕ್ಷೆಯ ವರದಿ ಬಂದ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಗೋಬಿಯಲ್ಲಿ ಕೃತಕ ಬಣ್ಣ ಬಳಸಿದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಗೋಬಿ ಮಂಚೂರಿ ಸಸ್ಯಾಹಾರಿ ಪದಾರ್ಥ, ಹೀಗಾಗಿ ನಿಷೇಧ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೃತಕ ಬಣ್ಣ ಬಳಸದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್-ಬಿ ಹಾಗೂ ಗೋಬಿ ಮಂಚೂರಿಯಲ್ಲಿ ಸನ್‌ಸೆಟ್ ಯೆಲ್ಲೊ ಬಣ್ಣ ಮತ್ತು ಟಾಟ್ರ್ರಾಜಿನ್ ರಾಸಾಯನಿಕ ಅಂಶ ಪತ್ತೆಯಾಗಿದೆ.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ಹಾಗೂ ಅಸಾಂಕ್ರಮಿಕ ಖಾಯಿಲೆ ಏರಿಕೆಯಾಗುತ್ತಿದೆ. ಸರಿಯಾದ ಆಹಾರ ತಯಾರು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹೆಚ್ಚು ಕೊಬ್ಬುಕಾರಕ, ಉಪ್ಪು ಹಾಗೂ ಸಕ್ಕರೆಯ ಆಹಾರ ಬಳಕೆಯಾಗುತ್ತಿದೆ.
ಹೀಗಾಗಿ 171 ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣ ಕಂಡು ಬಂದಿದೆ. 64 ಸುರಕ್ಷಿತವಾದ ಮಾದರಿಗಳು ಕಂಡು ಬಂದಿದೆ. ಟಾರ್ಟ್ರಾಜಿನ್, ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ನಂತ ಕೃತಕ ಬಣ್ಣಗಳನ್ನು ಬಳಸಲಾಗಿದೆ ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ತಿಳಿಸಿದರು.
ಇನ್ನು 25 ವಿಧದ ಕಾಟನ್ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. 15 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಕಂಡು ಬಂದಿದೆ. 10ರಲ್ಲಿ ಕೃತಕ ಬಣ್ಣ ಬಳಸಿಲ್ಲ. ಕೃತಕ ಬಣ್ಣ ಬಳಕೆ ಮಾಡಿ ಕ್ಯಾಂಡಿ ತಯಾರು ಮಾಡಬಹುದು.
ಆದರೆ ರೊಡಮೈನ್ ಬಿ, ಟಾರ್ಟ್ರಾಜಿನ್ನಂತಹ ಯಾವುದೇ ಬಣ್ಣ ಬಳಸಬಾರದು. ಇದು ಆರೋಗ್ಯಕ್ಕೆ ಹಾನಿಕಾರಕ. ಇದು ಸಂಪೂರ್ಣ ಕಾನೂನು ಬಾಹಿರ. ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಇನ್ಮುಂದೆ ಬಳಸುವಂತಿಲ್ಲ.
ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದರು.