ಬಿಜೆಪಿ ವರಿಷ್ಠರ ಸಂಧಾನಕ್ಕೆ ಕ್ಯಾರೇ ಅನ್ನದ ಈಶ್ವರಪ್ಪ; ಬಂಡಾಯದ ಖಡಕ್ ಸಂದೇಶ ರವಾನೆ: ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧಾರ: ಬಿಜೆಪಿಗೆ ಕಂಟಕವಾದ ಈಶ್ವರಪ್ಪ
ಶಿವಮೊಗ್ಗ: ತನ್ನ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಯಡಿಯೂರಪ್ಪ ಹಾಗು ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದು, ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ವಿಫಲಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್ವಾಲ್ ಹಾಗೂ ರಾಜ್ಯ ನಾಯಕರು ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್ ತೆರಳಿದರು.
ರವಿವಾರ ಬೆಳಿಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಡಿ.ಎಸ್. ಅರುಣ್ ಹಾಗೂ ಇತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ಮನೆಗೆ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸೋಮವಾರ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.
ಆದರೆ, ತಾವು ಬಂಡಾಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಅವರು ಖಡಕ್ ಸಂದೇಶ ರವಾನಿಸಿದರು. ರಾಜ್ಯ ನಾಯಕರ ಮಾತುಕತೆ ವಿಫಲವಾದ ಬಳಿಕ, ಮಧ್ಯಾಹ್ನ ಸ್ವತಃ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್ವಾಲ್ ಈಶ್ವರಪ್ಪ ಮನೆಗೆ ಭೇಟಿ ನೀಡಿದರು. ಆದರೆ, ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತುಕತೆಯ ಮಧ್ಯದಲ್ಲಿಯೇ ಈಶ್ವರಪ್ಪ ಸಭೆಯಿಂದ ಹೊರಹೋದರು. ಇದರ ಪರಿಣಾಮ ಸಂಧಾನ ಯಶಸ್ವಿಯಾಗಲಿಲ್ಲ. ಬಳಿಕ ಮಧ್ಯಾಹ್ನ 1.30ರವರೆಗೆ ಈಶ್ವರಪ್ಪ ಅವರಿಗಾಗಿ ಕಾದು ಕುಳಿದ ಕೇಂದ್ರ ನಾಯಕರ ನಿಯೋಗ, ಬಳಿಕ ಮನೆಯಿಂದ ವಾಪಸ್ಸಾಯಿತು.
ಈ ನಡುವೆ ಹೇಳಿಕೆ ನೀಡಿರುವ ಈಶ್ವರಪ್ಪ ಅವರು, ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರೂ ಅವರ ಹೆಸರು ಹೇಳುವುದನ್ನು ಬಿಡುವುದಿಲ್ಲ. ಆದರೆ, ಕುಟುಂಬವೊಂದರ (ಯಡಿಯೂರಪ್ಪ) ಕಪಿಮುಷ್ಟಿಯಿಂದ ಪಕ್ಷವನ್ನು ಬಿಡುಗಡೆಗೊಳಿಸಬೇಕು ಎನ್ನುವ ಉದ್ದೇಶದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಮೋದಿ ಬಳಿ ಹೋಗುವೆ. ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸದಿರುವ ಬಗ್ಗೆ ದುಃಖವಿದೆ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಅವರ ಪುತ್ರರ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರದೇ ರಾಜ್ಯಭಾರವಾಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ’ ಎಂದರು.