ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ ಮೂಲಭೂತ ಸೌಕರ್ಯ ಕುರಿತು ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ
ಹಿರಿಯಡ್ಕ: ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ 10 ಗ್ರಾಮ ಪಂಚಾಯತ್‌ಗಳ ಮೂಲಭೂತ ಸೌಕರ್ಯ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆಗಳ ಅಭಿವೃದ್ಧಿ ಬಗ್ಗೆ ವಿವಿಧ ಇಲಾಖಾಧಿಕಾರಿಗಳೊಂದಿಗೆ ಗುರುವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಿರಿಯಡಕ ಶಾಸಕರ ಕಚೇರಿ ಸಭೆ ನಡೆಸಿ ಚರ್ಚಿಸಿದರು.
ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ 10 ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಸಕಾಲದಲ್ಲಿ ನೀರು ಪೂರೈಕೆ ಮಾಡುವ ಬಗ್ಗೆ ಹಾಗೂ 94C/94CC ಅಡಿಯಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಮತ್ತು ಲೋ ವೋಲ್ಟೇಜ್ ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಲು ಟ್ರಾನ್ಸ್ಫಾರ್ಮರ್ ಅಳವಡಿಕೆ, ವಿದ್ಯುತ್ ಕಂಬಗಳ ಸ್ಥಳಾಂತರ, ಹಳೆ ವಿದ್ಯುತ್ ತಂತಿಗಳನ್ನು ಬದಲಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರರಾದ ಗುರುರಾಜ್, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ದೇವರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿಯಂತರರು, ಲೋಕೋಪಯೋಗಿ ಇಲಾಖೆ ಅಭಿಯಂತರರು, ಮೆಸ್ಕಾಂ ಇಲಾಖೆಯ ಅಭಿಯಂತರು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.