ಬಾರಕೂರಿನ ಹೊಸಾಳದಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವು
ಬ್ರಹ್ಮಾವರ : ಮೀನು ಹಿಡಿಯಲೆಂದು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳ ಎಂಬಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳದ ನಿವಾಸಿಗಳಾಗಿರುವ ಶ್ರೀಶ ಹಾಗೂ ಪ್ರಶಾಂತ್ ಎಂಬವರೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮೃತ ದುರ್ದೈವಿಗಳು. ಶ್ರೀಶ ಹಾಗೂ ಪ್ರಶಾಂತ್ ಕೆಲಸದ ಬಿಡುವಿನ ವೇಳೆಯಲ್ಲಿ ನದಿಯಲ್ಲಿ ಬಲೆ ಬಿಟ್ಟು ಮೀನನ್ನು ಹಿಡಿಯುತ್ತಿದ್ದರು. ಇಂದು ಮುಂಜಾನೆ ತಿಂಡಿ ತಿಂದು ಇಬ್ಬರು ನದಿಗೆ ಇಳಿದಿದ್ದಾರೆ. ಬಲೆ ಬಿಟ್ಟು ಮೀನು ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದರು.
ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆಯೇ ಶ್ರೀಶ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಪ್ರಶಾಂತ್ ಶ್ರೀಶನ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ ನದಿಯಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾದ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಇತರ ಈಜುಗಾರರ ತಂಡ ಸ್ಥಳಕ್ಕೆ ಬಂದು ಶವಗಳ ಶೋಧ ಕಾರ್ಯವನ್ನು ಆರಂಭಿಸಿತ್ತು. ಅಂತಿಮವಾಗಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈ ಕುರಿತು ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.