ಪ್ರಧಾನಿ ಮೋದಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 1 ಗಂಟೆಯವರೆಗೂ ಕೆಲಸ ಮಾಡುತ್ತಾರೆ: ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 5 ಗಂಟೆಗೆ ಕೆಲಸ ಆರಂಭಿಸಿ ತಡ ರಾತ್ರಿ 1 ಗಂಟೆಯವರೆಗೂ ಕೆಲಸ ಮಾಡುತ್ತಾರೆ ಎಂದು ಕೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ಇಂದು ರಿಪಬ್ಲಿಕ್ ಟಿವಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಉತ್ತಮ ಕೆಲಸಗಳನ್ನು ಒತ್ತಿ ಹೇಳಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದರು.
ಮುಂದಿನ ಹತ್ತು ವರ್ಷಗಳ ರಾಜಕೀಯ ದೃಷ್ಟಿಕೋನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ನಮ್ಮ ದೇಶದಲ್ಲಿ ಕ್ರಿಯಾತ್ಮಕ ಪ್ರಜಾಪ್ರಭುತ್ವವಿದೆ. ಅದು ನಮ್ಮ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅದರ ಆಧಾರದ ಮೇಲೆ ಜನಾದೇಶ ಬರುತ್ತದೆ. ಕೆಲಸ ಮಾಡುವವರಿಗೆ ದೇಶ ಅವಕಾಶವನ್ನು ನೀಡುತ್ತದೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ನಾವು ಅಧಿಕಾರದಲ್ಲಿ ಉಳಿಯುತ್ತೇವೆ. ಇಲ್ಲದಿದ್ದರೆ ಇಲ್ಲ. ಆದರೆ ಮುಂದಿನ 10 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ನಾನು ನಿಮಗೆ ಹೇಳಬಲ್ಲೆ ಎಂದರು.
ಪ್ರಧಾನಿ ಕುಟುಂಬದ ಬಗ್ಗೆ ಪ್ರಶ್ನೆ ಎತ್ತಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, "ಅವರು ಅಸಂಬದ್ಧವಾಗಿ ಮಾತನಾಡುವ ಮೂಲಕ ದೇಶದ ರಾಜಕೀಯದ ಮಟ್ಟವನ್ನು ತಗ್ಗಿಸಲು ಯತ್ನಿಸಿದ್ದಾರೆ. ಜನ ಪ್ರತಿ ಬಾರಿಯೂ ಅವರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ನಾನು ಮೋದಿ ಜಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ಒಂದರ್ಥದಲ್ಲಿ ಲಾಲೂ ಜಿ. ಮೋದಿಜಿಗೆ ಕುಟುಂಬವಿಲ್ಲ ಎಂದು ಸರಿಯಾಗಿಯೇ ಹೇಳಿದ್ದಾರೆ. ಯಾಕೆಂದರೆ ಕುಟುಂಬಗಳನ್ನು ಹೊಂದಿರುವವರು ತಮ್ಮ ಪುತ್ರರು ಮತ್ತು ಪುತ್ರಿಯರನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನಾಗಿ ಮಾಡಲು ಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದರು.
"ಮೋದಿ ಜೀ ಅವರು 40 ವರ್ಷಗಳಿಂದ ದೇಶದ ಜನರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ, 23 ವರ್ಷಗಳ ಕಾಲ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದರೂ ಅವರು ರಜೆ ತೆಗೆದುಕೊಂಡಿರುವುದನ್ನು ನಾನು ನೋಡಿಲ್ಲ. ಪ್ರಧಾನಿ ಮೋದಿ ಅವರು ಬೆಳಗ್ಗೆ 5 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಶ್ರದ್ಧೆಯಿಂದ ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ" ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.